Advertisement

ಪ್ರತಿ ಕುಟುಂಬಕ್ಕಿದೆ ಉದ್ಯೋಗ ಚೀಟಿ ಹೊಂದುವ ಹಕ್ಕು

03:22 PM Jul 19, 2019 | Naveen |

ಯಾದಗಿರಿ: ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಹೊಂದುವ ಹಕ್ಕು ಹೊಂದಿರುತ್ತದೆ ಎಂದು ಜಿಪಂ ಜಿಲ್ಲಾ ಐಇಸಿ ಸಂಯೋಜಕ ಪರಶುರಾಮ ಹೇಳಿದರು.

Advertisement

ಶಹಾಪುರ ತಾಲೂಕು ಕನ್ಯೆಕೌಳೂರು ಗ್ರಾಪಂ ವ್ಯಾಪ್ತಿಯ ತಿಪ್ಪನಟಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿರುವ ನಾಲಾ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ರೋಜಗಾರ ದಿವಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ ಮಾಡಿ ಜೀವನೋಪಾಯದ ಮಟ್ಟ ಸುಧಾರಿಸುವುದು, ಪಂಚಾಯತ್‌ ರಾಜ್‌ ವ್ಯವಸ್ಥೆ ಬಲಪಡಿಸುವುದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಉದ್ದೇಶವಾಗಿದೆ. ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲ ವಯಸ್ಕರು, ಅಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ ಎಂದು ಹೇಳಿದರು.

ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತಿದಿನ 249 ರೂ. ಸಮಾನ ಕೂಲಿ ನೀಡಲಾಗುತ್ತದೆ. ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ 15 ದಿನದೊಳಗೆ ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆಗೆ ಅವಕಾಶವಿರುತ್ತದೆ. ವಾರಾಂತ್ಯದಲ್ಲಿ ಕೂಲಿ ಪಾವತಿಸಬೇಕು. ತಪ್ಪಿದಲ್ಲಿ ಕೂಲಿ ವಿಳಂಬ ಪರಿಹಾರ ಭತ್ಯೆ ಪಡೆಯಲು ಅವಕಾಶವಿರುತ್ತದೆ. ಕೂಲಿ ಹಣ ನೇರವಾಗಿ ಇಎಫ್‌ಎಂಎಸ್‌ ಮೂಲಕ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಉದ್ಯೋಗದ ಬಗ್ಗೆ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗದಂತೆ ಕಾಮಗಾರಿಗಳು ಪ್ರಾರಂಭವಾಗಿದ್ದು, ಬದು ನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ಕೈಗೊಳ್ಳಲಾಗಿದೆ. ಚೆಕ್‌ ಡ್ಯಾಂ, ಕೆರೆ ಹೊಳೆತ್ತುವ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ಪಡೆದುಕೊಳ್ಳಬಹುದು ಎಂದು ಹೇಳಿದರು.

Advertisement

ತಾಲೂಕು ಐಇಸಿ ಸಂಯೋಜಕ ಭೀಮರೆಡ್ಡಿ, ಟಿಎಇ ಬಾಪುಗೌಡ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next