Advertisement

90 ತಾಂಡಾ ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ

04:28 PM Nov 15, 2019 | Naveen |

ಯಾದಗಿರಿ: ಜಿಲ್ಲೆಯ 90 ಜನವಸತಿ ತಾಂಡಾಗಳನ್ನು 3 ತಿಂಗಳೊಳಗೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು ಗುರುವಾರ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಹಶೀಲ್ದಾರ್‌ ಮತ್ತು ಎಡಿಎಲ್‌ಆರ್‌ ಅಧಿಕಾರಿಗಳು ಸಂಬಂಧಿಸಿದ ತಾಂಡಾಗಳಲ್ಲಿ ಜಂಟಿ ಸಭೆ ನಡೆಸಿ ತಾಂಡಗಳು ಯಾರಿಗೆ ಸೇರಿದ್ದು ಎಂದು ಮೊದಲು ತಿಳಿದುಕೊಳ್ಳಬೇಕು. ಇದರಲ್ಲಿ ಅರಣ್ಯ ಭೂಮಿ, ಕಂದಾಯ ಭೂಮಿ ಅಥವಾ ಖಾಸಗಿ ಭೂಮಿ ಯಾವವು ಎಂದು ಅರಿತುಕೊಳ್ಳಬೇಕು. 90 ತಾಂಡಾಗಳ ಜತೆಗೆ ಅರಣ್ಯ ಪ್ರದೇಶದಲ್ಲಿರುವ 3 ಜನವಸತಿಗಳನ್ನು ಕೂಡ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸಹಾಯಕ ಆಯುಕ್ತರು, ತಹಶೀಲ್ದಾರ್‌, ಭೂದಾಖಲೆಗಳ ಸಹಾಯಕ ನಿರ್ದೇಶಕರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಂಡಾಗಳು ಅರಣ್ಯ ಪ್ರದೇಶಕ್ಕೆ ಒಳಪಟ್ಟಿದಲ್ಲಿ ಅರಣ್ಯ ಸಮಿತಿ ಒಪ್ಪಿಗೆ ಪಡೆದು ಘೋಷಣೆ ಮಾಡಬೇಕಾಗಿರುತ್ತದೆ. ಕನಿಷ್ಠ 10 ವರ್ಷಗಳ ಕಾಲ ದಾಖಲೆ ರಹಿತವಾಗಿದ್ದರೂ ಜನವಸತಿ ಇರುವ ತಾಂಡಾ, ಹಟ್ಟಿ ಹಾಗೂ ಹಾಡಿ ಪ್ರತಿ ಮನೆಯವರಿಗೆ ಹಕ್ಕು ಪತ್ರ ನೀಡಿ ನಾಗರಿಕರಿಗೆ ಸಿಗುವ ಮೂಲಭೂತ ಸೌಕರ್ಯ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯಲ್ಲಿ 728 ಜನವಸತಿ ತಾಂಡಾ ಪ್ರದೇಶಗಳಿವೆ. ಇವುಗಳಲ್ಲಿ 50ಕ್ಕಿಂತ ಹೆಚ್ಚಿನ ತಾಂಡಾಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ. 90 ಜನವಸತಿ ಪ್ರದೇಶಗಳು ಖಾಸಗಿ ಒಡೆತನದ ಭೂಮಿಯಲ್ಲಿವೆ. ಭೂಮಿ ದತ್ತಾಂಶದ ಪ್ರಕಾರ 551 ಮಾತ್ರ ಜನವಸತಿ ತಾಂಡಾಗಳಿವೆ. 3 ತಾಂಡಾಗಳು ಅರಣ್ಯ ಪ್ರದೇಶದಲ್ಲಿವೆ. ಡಿಸೆಂಬರ್‌ 16, 2017ರಲ್ಲಿ ಭೂ ಕಂದಾಯ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿಯೊಂದಿಗೆ ಜಾರಿಗೊಳಿಸಿ ಗೆಜೆಟ್‌ ಮಾಡಲಾಗಿದೆ. ಅದರಂತೆ ಯಾವುದೇ ದಾಖಲೆಗಳು ಇಲ್ಲದೆ ಖಾಸಗಿ ಜಮೀನಿನಲ್ಲಿ ವಾಸಿಸುವ ತಾಂಡಾಗಳನ್ನು 3 ತಿಂಗಳೊಳಗೆ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಶ್ರಮಿಸಬೇಕು ಎಂದು ಹೇಳಿದರು.

ತಾಂಡಾಗಳ ಜತೆಗೆ ದಾಖಲೆರಹಿತವಾಗಿ ಜನರು ವಾಸವಾಗಿರುವ ಯಾವುದೇ ಪ್ರದೇಶವನ್ನು ಕೂಡ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಅವಕಾಶ ಇದೆ. ಅಧಿಕಾರಿಗಳು ಈ ಅವಕಾಶ ಸದುಪಯೋಗಪಡಿಸಿಕೊಂಡು ತಮ್ಮ ವೃತ್ತಿಗೆ ಗೌರವ ತಂದುಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಕಲಬುರಗಿ ಸಂಸದ ಡಾ| ಉಮೇಶ ಜಿ. ಜಾಧವ, ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್‌, ಕರ್ನಾಟಕ ತಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್‌ ರಾಠೊಡ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ ಹಾಗೂ ತಹಶೀಲ್ದಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next