ಯಾದಗಿರಿ: ಬಿಕ್ಷಾಟನೆ ಮಾಡುವವರು, ನಿರ್ಗತಿಕರು, ಅನಾಥರು, ದುರ್ಬಲರು ಹಾಗೂ ವೃದ್ಧರಿಗಾಗಿ ಆಶ್ರಯ ನೀಡುವ ಉದ್ದೇಶದಿಂದ ಸರ್ಕಾರ ಮಂಜೂರು ಮಾಡಿರುವ ನಿರಾಶ್ರಿತರ ಪರಿಹಾರ ಕೇಂದ್ರ ನಿರ್ಮಿಸಲು ಯಾದಗಿರಿ ಜಿಲ್ಲಾಡಳಿತ ಜಮೀನು ಗುರುತಿಸಿದೆ.
ಬಿಕ್ಷಾಟನೆ ನಿರ್ಮೂಲನಾ ಕಾಯ್ದೆ 2013ಯನ್ನು ಜಾರಿಗೆ ತಂದು ರಾಜ್ಯದಲ್ಲಿರುವ ಬಿಕ್ಷಾಟನೆಯಂತಹ ಅನಿಷ್ಟ ಪದ್ಧತಿಗೆ ಹೋಗಲಾಡಿಸಲು ಸಮಾಜ ಕಲ್ಯಾಣ ಇಲಾಖೆ ಮೂಲಕ ಜಿಲ್ಲೆಗೊಂದರಂತೆ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಿ 2017ರಲ್ಲಿ ಆದೇಶ ನೀಡಿದ್ದು, ಈ ಹಿಂದೆಯೇ ತಾಲೂಕಿನ ಕೊಯಿಲೂರು ವ್ಯಾಪ್ತಿಯಲ್ಲಿ ತಾಲೂಕು ಆಡಳಿತ 8 ಎಕರೆ ಜಮೀನು ಗುರುತಿಸಿತ್ತು, ಬೆಂಗಳೂರಿನಿಂದ ಆಗಮಿಸಿದ್ದ ಪರಿಶೀಲನಾ ತಂಡ ಸ್ಥಳ ಸರಿಯಾಗಿಲ್ಲ ಎಂದು ತಿರಸ್ಕರಿಸಿತ್ತು.
ಇದೀಗ ಯಾದಗಿರಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರು ಜಿಲ್ಲೆಯಲ್ಲಿ ಬಿಕ್ಷಾಟನೆಯಂತ ಪದ್ಧತಿ ನಿರ್ಮೂಲನೆಗೆ ಕಾಳಜಿ ವಹಿಸಿ ಶಹಾಪುರ ತಾಲೂಕಿನ ದೋರನಹಳ್ಳಿ ಸಮೀಪದಲ್ಲಿ 10 ಎಕರೆ ಜಮೀನು ಗುರುತಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಮೀನು ಸಮಾಜ ಕಲ್ಯಾಣ ಇಲಾಖೆ ಹೆಸರಿಗೆ ನೋಂದಣಿಯಾದ ಬಳಿಕ ಅಂದಾಜು 20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ನಿರಾಶ್ರಿತರ ಕೇಂದ್ರವೂ ಸಕಲ ಮೂಲಭೂತ ಸೌಕರ್ಯಗಳ ಜೊತೆಗೆ ಊಟ, ವಸತಿ ಹಾಗೂ ಕೌಶಲ್ಯ ತರಬೇತಿಯನ್ನು ಸಹ ನೀಡುವ ವ್ಯವಸ್ಥೆಯನ್ನು ಒಳಗೊಂಡಿದೆ. ನಿರಾಶ್ರಿತರ ಕೇಂದ್ರದಿಂದಲೇ ಬಿಕ್ಷಾಟನೆ ನಿರ್ಮೂಲನೆಗೊಳಿಸಲು ಆರೋಗ್ಯವಂತರಾಗಿರುವ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಸ್ವಂತ ಉದ್ಯೋಗ ಸ್ಥಾಪಿಸಲು ಸಿದ್ಧರಾಗಿಸಿ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯವೂ ನಡೆಯಲಿದೆ. ಅಲ್ಲದೇ ಮಹಿಳೆಯರಿಗಾಗಿ ಬುಟ್ಟಿ ತಯಾರಿಕೆ ತರಬೇತಿ ಹಾಗೂ ಮೇಣದ ಬತ್ತಿ ತಯಾರಿಕೆ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿಸುವ ಗುರಿ ಸರ್ಕಾರದ್ದಾಗಿದೆ.
ಕೇಂದ್ರ ನಿರ್ವಹಣೆಗೆ ಪ್ರತ್ಯೇಕವಾಗಿ ವಾರ್ಡನ್ ಹಾಗೂ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಿ ಸರ್ಕಾರ ಕಟ್ಟುನಿಟ್ಟಾಗಿ ನಿರ್ವಹಣೆ ಮಾಡುವ ಕುರಿತು ರೂಪರೇಷೆ ತಯಾರಿಸಿದೆ. ಪ್ರಮುಖವಾಗಿ ಕೇಂದ್ರ ನಿರ್ವಹಣೆಗೆ ರಾಜ್ಯ ಸರ್ಕಾರದ ಅನುದಾನ ಜೊತೆಗೆ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಬಿಕ್ಷುಕರ ಕರವನ್ನು ಸಹ ಇದರ ನಿರ್ವಹಣೆಗೆ ವ್ಯಯಿಸಲಾಗುತ್ತದೆ. ಅಲ್ಲದೇ ಕೇಂದ್ರ ಸರ್ಕಾರವೂ ಇದಕ್ಕೆ ವಿಶೇಷ ಅನುದಾನ ನೀಡಲಿದೆ.