ಯಾದಗಿರಿ: ನಗರ ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ ಮಲದ ಗುಂಡಿಗಿಳಿದು ಕಾರ್ಮಿಕನೊಬ್ಬ ಪೈಪ್‌ಲೈನ್ ಸ್ವಚ್ಛಗೊಳಿಸಿರುವ ಅಮಾನವೀಯ ವರದಿಯನ್ನು ಮಾರ್ಚ್ 27ರಂದು ಉದಯವಾಣಿ ಪ್ರಕಟಿಸಿದ ಹಿನ್ನೆಲೆ ವರದಿ ಪ್ರಕಟವಾದ ದಿನವೇ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗವು ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಇದೀಗ ರೈಲ್ವೆ ಅಧಿಕಾರಿಗಳು ಇಲಾಖೆ ವಿಚಾರಣೆ ನಡೆಸಿ ವರದಿಯನ್ನು ಆಯೋಗಕ್ಕೆ ರವಾನಿಸಿರುವ ಮಾಹಿತಿ ಲಭ್ಯವಾಗಿದೆ.
ಘಟನೆ ಕುರಿತು ಗುಂತಕಲ್ ವಿಭಾಗದ ಉನ್ನತ ಅಧಿಕಾರಿಗಳಿಗೆ ಆಯೋಗ ನೋಟಿಸ್ ನೀಡಿದ ಹಿನ್ನೆಲೆ ಗುಂತಕಲ್ ಡಿಆರ್‌ಎಂ ಕಾರ್ಯಾಲಯ ರಾಯಚೂರಿನ ಎಡಿಇಎನ್ ಜಿ. ಸುದರ್ಶನಮ್ ಅಧ್ಯಕ್ಷತೆಯಲ್ಲಿ ಎಡಿಎಂಒ ಕೆ. ಅನೀಲಕುಮಾರ ಹಾಗೂ ಎಡಿಎಸ್‌ಟಿ ಡಿ. ಜನಾರ್ಧನ ಅವರನ್ನೊಳಗೊಂಡ ತನಿಖಾ ತಂಡ ರಚಿಸಿತ್ತು.
ಏಪ್ರಿಲ್ 3ರಂದು ಬೆಳಗ್ಗೆ 10:00 ಗಂಟೆಗೆ ರಾಯಚೂರಿನ ಸಹಾಯಕ ವಿಭಾಗೀಯ ಇಂಜಿನಿಯರ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೊಟೀಸ್ ನೀಡಿದ್ದರು. ಘಟನೆ ನಡೆದ ವೇಳೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿಯೇ ಇದ್ದ ರಾಯಚೂರಿನ ಆರೋಗ್ಯ ನಿರೀಕ್ಷಕ ಮಿದುನ್ ಮತ್ತು ಮಲದ ಗುಂಡಿಗಿಳಿದ ಕಾರ್ಮಿಕ ಖಾದರವಲಿ ಅವರನ್ನು ವಿಚಾರಣೆ ನಡೆಸಿದ್ದಾರೆ.
ಕಾರ್ಮಿಕ ಯಾವುದೇ ಸುರಕ್ಷತೆ ಅಳವಡಿಸಿಕೊಳ್ಳದೇ ಮಲದ ಗುಂಡಿಗಿಳಿದು ಪೈಪ್‌ಲೈನ್ ಜಾಮ್ ಆಗಿರುವುದನ್ನು ಸ್ವಚ್ಛಗೊಳಿಸುತ್ತಿರುವ ಕುರಿತು ಚಿತ್ರ ಸಮೇತ ವರದಿಯಾಗಿದ್ದರೂ ಅಧಿಕಾರಿಗಳ ವರದಿಯಲ್ಲಿ ಮಾತ್ರ ಚರಂಡಿಯಲ್ಲಿನ ಸ್ನಾನದ ನಿರುಪಯುಕ್ತ ನೀರು ಸ್ವಚ್ಛಗೊಳಿಸಲಾಗಿದೆ ಎಂದು ಉಲ್ಲೇಖೀಸಿದ್ದು, ಮ್ಯಾನುವೆಲ್ ಸ್ಕಾ ್ಯವೆಂಜಿಂಗ್ ಕಾಯ್ದೆ 2013 ಉಲ್ಲಂಘನೆಯಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಘಟನೆ ಸಾಕ್ಷ್ಯ ಸಂಗ್ರಹಿಸಿದ ಆಯೋಗದ ಸದಸ್ಯ: ರೈಲ್ವೆ ನಿಲ್ದಾಣ ಆವರಣದಲ್ಲಿ ಮಲದ ಗುಂಡಿಗಿಳಿದು ಕಾರ್ಮಿಕ ಕೇವಲ ಒಳ ಉಡುಪಿನಲ್ಲಿ ಸ್ವಚ್ಛಗೊಳಿಸಿರುವ ಅಮಾನವೀಯ ವರದಿ ಪ್ರಕಟವಾಗುತ್ತಿದ್ದಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಘಟನೆಯ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಘಟನೆ ಕುರಿತು ಗಂಭೀರವಾಗಿ ಪರಿಗಣಿಸಿರುವ ಸಫಾಯಿ ಕರ್ಮಚಾರಿ ಆಯೋಗ ರೈಲ್ವೆ ಅಧಿಕಾರಿಗಳು ನೀಡಿರುವ ವರದಿ ಆಧಾರದಲ್ಲಿಯೇ ಪ್ರಕರಣವನ್ನು ಮುಕ್ತಾಯಗೊಳಿಸುತ್ತದೆಯೋ ಇಲ್ಲವೇ ಆಯೋಗದಿಂದ ಪ್ರತ್ಯೇಕ ವಿಚಾರಣೆ ನಡೆಸುತ್ತದೋ ಎನ್ನುವುದನ್ನು ಕಾಯ್ದು ನೋಡಬೇಕಿದೆ.
ಆಯೋಗದಿಂದ ಗುಂತಕಲ್ ವಿಭಾಗದ ಉನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿ ಸಲಾಗಿತ್ತು. ಚರಂಡಿಯಲ್ಲಿ ಸ್ನಾನಗೃಹದ ನಿರುಪಯುಕ್ತ ನೀರು ನಿಂತಿರುವುದನ್ನು ಸ್ವಚ್ಛಗೊಳಿಸಲಾಗುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಪ್ರಕರಣ ಕುರಿತು ಆಯೋಗದ ಕಾರ್ಯದರ್ಶಿಗೆ ಕಳಿಸಿ ಅಭಿಪ್ರಾಯ ಪಡೆಯಲಾಗುವುದು. ಬಳಿಕ ಮುಂದಿನ ಕ್ರಮದ ಕುರಿತು ನಿರ್ಧಾರ ಮಾಡಲಾಗುವುದು.
•
ಜಗದೀಶ ಹಿರೇಮನಿ,
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ