ಅನೀಲ ಬಸೂದೆ
ಯಾದಗಿರಿ: ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳಿನಿಂದಲೂ ರೈತರು ಹತ್ತಿ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ಯಾದಗಿರಿಯಲ್ಲಿ ಇನ್ನೂ ಖರೀದಿ ಕೇಂದ್ರ ಆರಂಭವಾಗದ ಹಿನ್ನೆಲೆಯಲ್ಲಿ ಮಾಲು ದಲ್ಲಾಳಿಗಳ ಪಾಲಾಗುತ್ತಿದೆ. ಇನ್ನೂ ಯಾವಾಗ ಖರೀದಿ ಕೇಂದ್ರ ಆರಂಭವಾಗುತ್ತದೆ ಎನ್ನುವ ಪ್ರಶ್ನೆ ಕಾಡತೊಡಗಿದೆ.
ಈಗಾಗಲೇ ಜಿಲ್ಲೆಯ ರೈತರಿಗೆ ಸೂಕ್ತ ಬೆಲೆ ಸಿಗಲಿ ಎಂದು ಕೃಷಿ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಭಾರತೀಯ ಹತ್ತಿ ನಿಗಮ ಮತ್ತು ಮಿಲ್‌ಗಳೊಂದಿಗೆ ಒಪ್ಪಂದ ಮಾಡಿಸಿ ಹತ್ತಿ ಖರೀದಿಗೆ ಜಿಲ್ಲೆಯಲ್ಲಿ 5 ಕೇಂದ್ರ ಆರಂಭಿಸುವುದಾಗಿ ಹೇಳಿದ್ದಾರೆ. ಅದರಂತೆ ಶಹಾಪುರದಲ್ಲಿ ಖರೀದಿಗೆ 3 ಕೇಂದ್ರ ನಿಗದಿ ಮಾಡಲಾಗಿದೆ. ಆದರೆ ಯಾದಗಿರಿ ಹತ್ತಿ ಮಿಲ್ ಮಾಲೀಕರೊಂದಿಗೆ ಇನ್ನೂ ಒಪ್ಪಂದವಾಗಿಲ್ಲ ಎನ್ನಲಾಗುತ್ತಿದೆ.
ಗುಣಮಟ್ಟದ ಆಧಾರದಲ್ಲಿ ಕ್ವಿಂಟಲ್‌ಗೆ 5,250ರಿಂದ 5,550 ರೂಪಾಯಿ ದರ ನಿಗದಿ ಮಾಡಲಾಗಿದ್ದು, ಪ್ರಸ್ತುತ ಶಹಾಪುರದಲ್ಲಿ ಈಗಾಗಲೇ 42 ಜನ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. 90 ಕ್ವಿಂಟಲ್ ಹತ್ತಿ ಖರೀದಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯಾದಗಿರಿಯಲ್ಲಿ ಕೇವಲ ನೋಂದಣಿ ಮಾತ್ರ ಆರಂಭಿಸಲಾಗಿದ್ದು, ಈವರೆಗೆ 32 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಖರೀದಿ ಮಾತ್ರ ಆರಂಭವಾಗದಿರುವುದರಿಂದ ರೈತರು ಅನಿವಾರ್ಯವಾಗಿ ದಲ್ಲಾಳಿಗರ ಮೊರೆ ಹೋಗುವಂತಾಗಿದೆ.
ಜಿಲ್ಲೆಯ ಶಹಾಪುರ, ಯಾದಗಿರಿ, ಗುರುಮಠಕಲ್ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಹತ್ತಿ ಬೆಳೆದಿದ್ದಾರೆ. ಈಗ ಹತ್ತಿ ಕೊಯ್ಲಿಗೆ ಬಂದಿದೆ. ಸುಮಾರು 1 ತಿಂಗಳಿನಿಂದ ಹತ್ತಿ ಖರೀದಿ ಜೋರಾಗಿ ಸಾಗಿದೆ. ಈ ಮಧ್ಯೆ ಜಿಲ್ಲೆಯ ಬಹುತೇಕ ಕಡೆ ರಸ್ತೆಯುದ್ದಕ್ಕೂ ದಲ್ಲಾಳಿಗಳು ರೈತರಿಂದ ಹತ್ತಿ ಖರೀದಿಸಲು ತಾತ್ಕಾಲಿಕ ವ್ಯಾಪಾರ ಆರಂಭಿಸಿದ್ದಾರೆ. ಇದರಿಂದ ನಿಗದಿಗಿಂತ ಕಡಿಮೆ ಬೆಲೆಗೇ ರೈತರಿಂದ ಖರೀದಿಸಲಾಗುತ್ತಿದೆ. ತಕ್ಷಣ ನಗದು ದೊರೆಯುವ ಆಸೆಯಿಂದ ರೈತರು ದಲ್ಲಾಳಿಗಳಿಗೆ ಕೈಕೊಟ್ಟು ಹಗ್ಗ ಕಟ್ಟಿಸಿಕೊಳ್ಳುತ್ತಿದ್ದಾರೆ.
ಮಾರುಕಟ್ಟೆ ವ್ಯವಸ್ಥೆಯಾಗಲಿ: ಹತ್ತಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಇದರ ಲಾಭ ಪಡೆಯುತ್ತಿರುವ ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ ಅನಧಿಕೃತವಾಗಿ ಎರಡು ಕೆಜಿ ಹತ್ತಿ, ಹಮಾಲಿ ಶುಲ್ಕ ಇನ್ನಿತರ ಕಟಾವು ಮಾಡುತ್ತಿದ್ದು, ಸರಿಸುಮಾರು ಕ್ವಿಂಟಲ್ ಬೆಳೆಗೆ 3-4 ಕೆಜಿಯಷ್ಟು ವಂಚಿಸುತ್ತಿರುವ ಮಾತುಗಳು ಕೇಳಿಬರುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಹತ್ತಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡುವ ಕುರಿತು ಸರ್ಕಾರದ ಗಮನ ಸೆಳೆಯಬೇಕಿದೆ.
ಮುಂದುವರೆದ ದಂಡ ವಸೂಲಿ: ರಸ್ತೆ ಬದಿಯಲ್ಲಿ ಅನಧಿಕೃತವಾಗಿ ರೈತರಿಂದ ಹತ್ತಿ ಖರೀದಿಸುವ ದಲ್ಲಾಳಿಗಳ ಮೇಲೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದಾರೆ. ಅನಧಿಕೃತವಾಗಿ ಖರೀದಿ ಮಾಡುತ್ತಿರುವ ಯಾದಗಿರಿ ತಾಲೂಕಿನ ವ್ಯಾಪಾರಿಗಳಿಗೆ ಈವರೆಗೆ 7.80 ಲಕ್ಷ ರೂ. ದಂಡ ವಿಧಿಸಲಾಗಿದೆ. ಶಹಾಪುರ ವ್ಯಾಪ್ತಿಯಲ್ಲಿ 6.23ಲಕ್ಷ ರೂ. ದಂಡ ವಿಧಿಸಲಾಗಿದೆ.