Advertisement

1.62 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

12:41 PM Jan 10, 2020 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಜ. 19ರಿಂದ 22ರ ವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ 1,62,255 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ಸಂಬಂಧಿಸಿ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮದ ಅಂಗವಾಗಿ ಗುರುವಾರ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್‌ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜ.19ರಂದು ಜಿಲ್ಲೆಯಲ್ಲಿ ಸ್ಥಾಪಿಸಲಾಗುವ 648 ಬೂತ್‌ಗಳಲ್ಲಿ ಪೋಲಿಯೊ ಲಸಿಕೆ ಹಾಕಬೇಕು. ಒಂದು ಬೂತ್‌ಗೆ ಇಬ್ಬರಂತೆ ಲಸಿಕೆ ನೀಡುವ ಕಾರ್ಯಕರ್ತರನ್ನು ನಿಯೋಜಿಸಬೇಕು. ರವಿವಾರ ಲಸಿಕೆಯಿಂದ ತಪ್ಪಿಸಿಕೊಂಡ ಮಕ್ಕಳಿಗೆ ಜ. 20ರಿಂದ 22ರವರೆಗೆ ಅಂಗನವಾಡಿ ಕಾರ್ಯಕರ್ತರು, ಶುಶ್ರೂಷಕರು ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ಹನಿ ಹಾಕುವಂತೆ ನಿರ್ದೇಶಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರು ಹೆಚ್ಚಾಗಿ ಕೃಷಿ ಮತ್ತು ಇನ್ನಿತರ ಕೂಲಿ ಕೆಲಸಗಳಿಗಾಗಿ ತೆರಳುತ್ತಾರೆ. ಹತ್ತಿ ಬಿಡಿಸುವುದು, ಕಳೆ ಕೀಳುವುದು, ರಾಶಿ, ಇಟ್ಟಂಗಿ ಭಟ್ಟಿ, ಕಟ್ಟಡ ನಿರ್ಮಾಣ ಕೆಲಸಗಳಿಗೆ ಹೋಗುವಾಗ ಪೋಷಕರು ತಮ್ಮ ಜತೆಗೆ ಮಕ್ಕಳನ್ನು ಕೂಡ ಕರೆದುಕೊಂಡು ಹೋಗಿರುತ್ತಾರೆ. ಇಂತಹ ಕಾರ್ಮಿಕ ವರ್ಗದ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿಯೊಂದು ಮಗುವಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಬೇಕು. 0-5 ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ. ಪೋಲಿಯೊ ಲಸಿಕೆ ಹಾಕುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಜನವರಿ 18 ಮತ್ತು 19ರಂದು ಶಾಲೆ ಮಕ್ಕಳು, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಂದ ಗ್ರಾಮಗಳಲ್ಲಿ ಪ್ರಭಾತ ಪೇರಿ ನಡೆಸಬೇಕು. ಅಲ್ಲದೇ, ಗ್ರಾಮಗಳಲ್ಲಿ ಡಂಗೂರ ಸಾರುವಂತೆ ಸೂಚಿಸಿದರು.

Advertisement

ಲಸಿಕೆ ನೀಡುವ ಸಂದರ್ಭದಲ್ಲಿ ಬಳಸುವ ಐಸ್‌ ಪ್ಯಾಕ್‌ ತಯಾರಿಕೆಗೆ ವಿದ್ಯುತ್‌ ಅಗತ್ಯವಾಗಿರುತ್ತದೆ. ಕಾರಣ ಜಿಲ್ಲೆಯ
41 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 10 ದಿನಗಳ ಕಾಲ ನಿರಂತರ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಬೇಕು
ಎಂದು ಜೆಸ್ಕಾಂ ಇಂಜಿನಿಯರ್‌ಗಳಿಗೆ ಸೂಚಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ಕಲಬುರಗಿ ವಿಭಾಗಮಟ್ಟದ ವೈದ್ಯಕೀಯ
ಸರ್ವೇಕ್ಷಣಾಧಿಕಾರಿ ಡಾ| ಅನಿಲಕುಮಾರ ಎಸ್‌. ತಾಳಿಕೋಟಿ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಬಗ್ಗೆ ವಿವರಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ
ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್‌. ಪಾಟೀಲ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಲಕ್ಷ್ಮೀಕಾಂತ, ಆಯುಷ್ಮಾನ್‌ ಭಾರತ-
ಆರೋಗ್ಯ ಕರ್ನಾಟಕ ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಭಗವಂತ ಅನವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಸೇರಿದಂತೆ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next