ಯಾದಗಿರಿ: ಬಸ್ ಪ್ರಯಾಣ ಮತ್ತು ಅನಿಲ ದರ ಏರಿಕೆ ವಿರೋಧಿಸಿ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐಸಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ, ಸಾರಿಗೆ ಸಂಸ್ಥೆಗಳು ಬಸ್ ಪ್ರಯಾಣ ದರ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದರಿಂದ ಬಡವರ ಹೊಟ್ಟೆ ಮೇಲೆ ಬರೆ ಹಾಕಿದಂತಾಗಿದೆ. ವಾರದ ಹಿಂದೆ ಅನಿಲ ದರ ಹೆಚ್ಚಿಗೆ ಮಾಡಲಾಗಿದೆ. ಹಾಲಿನ ದರ ಹೆಚ್ಚಾಗಿದೆ. ಪಡಿತರದಲ್ಲಿ ಪ್ರತಿಯಬ್ಬರಿಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯಲ್ಲಿ 2 ಕೆಜಿ ಅಕ್ಕಿ ಕಡಿತಗೊಳಿಸಲಾಗಿದೆ. ಹೀಗಾಗಿ ಬಡವರು ನೆಮ್ಮದಿಯಿಂದ ಬದುಕಲು ಸರ್ಕಾರ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ -ಡೀಸೆಲ್ ದರ ಏರಿಕೆ ಮಾಡುತ್ತಿದೆ. ರೈಲು ಪ್ರಯಾಣ ದರ ಏರಿಸಿದೆ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿಸಿವೆ. ಆ ಮೂಲಕ ಜನ ಸಾಮಾನ್ಯರ ಬೆನ್ನಿನ ಮೇಲೆ ಒಂದಾದ ಮೇಲೊಂದರಂತೆ ದೊಡ್ಡ ದೊಡ್ಡ ಬರೆಗಳನ್ನು ಎಳೆದಿದೆ. ಇನ್ನೊಂದೆಡೆ ರಾಜ್ಯ ಸರ್ಕಾರ ಇತ್ತೀಚೆಗೆ ಹಾಲಿನ ದರ ಏರಿಸಿದೆ.
ಪಡಿತರ ಅಂಗಡಿಗಳಲ್ಲಿ ವಿತರಿಸುತ್ತಿರುವ ವಿವಿಧ ಸಬ್ಸಿಡಿ ಆಹಾರ ದಾನ್ಯಗಳನ್ನು ಕಡಿತ ಮಾಡಿದೆ. ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ವಿತರಿಸುತ್ತಿದ್ದ 7 ಕೆಜಿ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡುವುದಾಗಿ ಪ್ರಕಟಿಸಿದೆ. ಕಳೆದ ಎರಡು ವರ್ಷಗಳ ಸತತ ಪ್ರವಾಹದಿಂದ ಸಂತ್ರಸ್ತರಾದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಮತ್ತೇ ಶೇ. 12ರಷ್ಟು ಬಸ್ ಪ್ರಯಾಣ ದರ ಏರಿಕೆ ಗದಾ ಪ್ರಹಾರ ಮಾಡಿ ಬಡವರು ಮೇಲೇಳದಂತಹ ಹೊಡೆತ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಅನಿಲ ದರ ಏರಿಕೆ ಮಾಡಿರುವುದನ್ನು ನೋಡಿದರೆ ಬಡವರು ಬದುಕುವುದು ಕಷ್ಟಕರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನಬಂದಂತೆ ಪೆಟ್ರೋಲ್, ಅನಿಲ ದರಗಳನ್ನು ಏರಿಕೆ ಮಾಡಿದರೆ, ರಾಜ್ಯ ಸರ್ಕಾರ ಬಸ್ ಪ್ರಯಾಣ, ಹಾಲಿನ ದರ ಹೆಚ್ಚು ಮಾಡಿದೆ. ಕೂಡಲೇ ಕೇಂದ್ರ, ರಾಜ್ಯ ಸರ್ಕಾರಗಳು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು.
ಎಲ್ಲರಿಗೂ ಉದ್ಯೋಗ ನೀಡಬೇಕು. ಬಸ್ ಪ್ರಯಾಣ ದರ ಏರಿಕೆ ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆ ಮುಖ್ಯಸ್ಥೆ ಉಮಾದೇವಿ, ರಾಮಲಿಂಗಪ್ಪ ಬಿ.ಎನ್., ಸೈದಪ್ಪ ಎಚ್.ಪಿ., ಸುಭಾಷಚಂದ್ರ ಬಿ.ಕೆ., ಸಿಂಧು ಬಿ., ಜಮಾಲ್ ಸಾಬ್, ನಾಗರಾಜ, ಮಲ್ಲಮ್ಮ, ಸಾಬಮ್ಮ, ಲಕ್ಷ್ಮಮ್ಮ, ದೇವಕಮ್ಮ, ನಜೀರಾಬೇಗಂ, ಅಮೀನಾಬೇಗಂ, ಮೈನೊದ್ಧೀನ್ ಇದ್ದರು.