Advertisement

ಮಕ್ಕಳು-ಗರ್ಭಿಣಿಯರಿಗೆ ತಪ್ಪದೇ ಲಸಿಕೆ ಹಾಕಿಸಿ: ಕೂರ್ಮಾರಾವ್‌

05:11 PM Mar 04, 2020 | Naveen |

ಯಾದಗಿರಿ: ಜಿಲ್ಲಾದ್ಯಂತ ಮಾರ್ಚ್‌ 2ರಿಂದ ಆರಂಭಗೊಂಡಿರುವ ತೀವ್ರ ತರದ ಮಿಷನ್‌ ಇಂದ್ರಧನುಷ್‌ 2.0 ಅಭಿಯಾನದಲ್ಲಿ ಲಸಿಕೆಯಿಂದ ವಂಚಿತರಾದ ಮಕ್ಕಳು, ಗರ್ಭಿಣಿಯರಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭಾಂಗಣದಲ್ಲಿ ನಡೆದ ತೀವ್ರ ತರದ ಮಿಷನ್‌ ಇಂದ್ರಧನುಷ್‌ ಕಾರ್ಯಕ್ರಮ ಹಾಗೂ ವೈದ್ಯಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರ್ವೇ ಮುಖಾಂತರ ಲಸಿಕೆಯಿಂದ ವಂಚಿತ 1,222 ಮಕ್ಕಳು ಹಾಗೂ 121 ಗರ್ಭಿಣಿಯರನ್ನು ಗುರುತಿಸಿದ್ದು, ಅಭಿಯಾನದಲ್ಲಿ ಇವರೆಲ್ಲರಿಗೂ ಲಸಿಕೆ ನೀಡಬೇಕು. ಅಭಿಯಾನ ಯಶಸ್ಸಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಇನ್ನೂ ಇಂದ್ರಧನುಷ್‌ 2.0 ಅಭಿಯಾನ ಬಗ್ಗೆ ಲಸಿಕೆ ನೀಡುವುದರ ಜೊತೆಗೆ ಇನ್ನಿತರ ಡೆಂಘಿ ಜ್ವರ ಸೇರಿದಂತೆ ವಿವಿಧ ರೋಗಗಳ ಬಗ್ಗೆ ಪರಿಶೀಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಬೇಕು. ಪ್ರತಿಯೊಂದು ಹಳ್ಳಿ ಹಾಗೂ ತಾಂಡಾಗಳಿಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕುವುದರ ಜೊತೆಗೆ ಇತ್ಯಾದಿ ರೋಗಗಳ ಹರುಡುವಿಕೆ ಬಗ್ಗೆ ತಪಾಸಣೆ ನಡೆಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಸಿಇಒ ಶಿಲ್ಪಾ ಶರ್ಮಾ ಮಾತನಾಡಿ, ಲಸಿಕೆಯಿಂದ ವಂಚಿತ ಆದ ಮಕ್ಕಳಿಗೆ ಲಸಿಕೆ ಹಾಕಬೇಕು ಹಾಗೂ ಗರ್ಭಿಣಿಯರ ಆರೋಗ್ಯವನ್ನು ತಪಾಸಣೆ ಮಾಡಬೇಕು. ಅಲ್ಲದೇ ಮುಖ್ಯವಾಗಿ ಮಾರನಾಳ ತಾಂಡಾದಂತಹ ಪ್ರಕರಣಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ವೈದ್ಯಾಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿ ಕಾರಿಗಳಿಗೆ ಸೂಚಿಸಿದರು.

Advertisement

ಕಲಬುರಗಿ ವಿಭಾಗ ಮಟ್ಟದ ವಿಶ್ವ ಆರೋಗ್ಯ ಸಂಸ್ಥೆ ವೈದ್ಯಕೀಯ ಸರ್ವೇಕ್ಷಣಾಅಧಿಕಾರಿ ಡಾ| ಅನೀಲ ಕುಮಾರ್‌ ಎಸ್‌. ತಾಳಿಕೋಟಿ ಮಾತನಾಡಿ, ತೀವ್ರ ತರದ ಮಿಷನ್‌ ಇಂದ್ರಧನುಷ್‌ 2.0 ಲಸಿಕಾ ಕಾರ್ಯಕ್ರಮ ನಾಲ್ಕು ಸುತ್ತುಗಳಲ್ಲಿ ನಡೆದಿದ್ದು, ಈಗಾಗಲೇ ಮೊದಲನೇ ಸುತ್ತು ಡಿಸೆಂಬರ್‌ 02. 2019ರಿಂದ 10ರ ವೆರೆಗೆ, ಎರಡನೇ ಸುತ್ತು ಜನವರಿ 03 2020ರಿಂದ 11ರ ವರೆಗೆ, ಮೂರನೇ ಸುತ್ತು ಫೆ. 3ರಿಂದ 14ರ ವರೆಗೆ ನಡೆದಿದ್ದು, ಈಗ ನಾಲ್ಕನೇ ಸುತ್ತು ಮಾರ್ಚ್‌ 2ರಿಂದ 11ರ ವರೆಗೆ ನಡೆಯಲಿದೆ ಎಂದು ಹೇಳಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಲಕ್ಷ್ಮೀಕಾಂತ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್‌. ಪಾಟೀಲ, ಆರೋಗ್ಯ ಇಲಾಖೆ ಕಲ್ಯಾಣ ಕರ್ನಾಟಕದ ಸಹ ನಿರ್ದೇಶಕ ಡಾ| ಶಿವಾನಂದ ಶಿವಗಾಳಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ| ಭಗವಂತ ಅನವಾರ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next