ಯಾದಗಿರಿ: ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವು ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ವೃಂದ ಮತ್ತು ನೇಮಕಾತಿ ನಿಯಮ ಬದಲಾಯಿಸಿ ವೇತನ ಶ್ರೇಣಿ ನಿಗದಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿತು.
ನಗರದ ಮುಖ್ಯಬೀದಿಯಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಶಿಕ್ಷಕರು, ಪ್ರಮುಖವಾಗಿ ಎನ್‌ಪಿಎಸ್ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮುಂದುವರೆಸಬೇಕು, ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸುವುದು, ಶಿಕ್ಷಕರ ಹೆಚ್ಚುವರಿ ಪ್ರಕ್ರಿಯಿಯಲ್ಲಿರುವ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು, ಶಿಕ್ಷಕ ಮತ್ತು ವಿದ್ಯಾರ್ಥಿ ಅನುಪಾತ ಗುರುತಿಸುವಾಗ ಮುಖ್ಯೋಪಾಧ್ಯಯ, ದೈಹಿಕ ಶಿಕ್ಷಕರನ್ನು ಹೊರತು ಪಡಿಸಿ ಹೆಚ್ಚುವರಿ ಪ್ರಕ್ರಿಯಿಯನ್ನು ಆರಂಭಿಸಬೇಕು ಎನ್ನುವುದು ಸೇರಿದಂತೆ 6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಮುಖ್ಯಗುರುಗಳಿಗೆ 5 ವರ್ಷಕ್ಕೊಮ್ಮೆ ಬಡ್ತಿ ನೀಡುವುದು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆಗವರೆಗೂ ಬಡ್ತಿ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಹಿಂದೆ ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆಗಿರುವ ಸೇವೆಯನ್ನು ಸತತ ಸೇವೆಯೆಂದು ಪರಿಗಣಿಸಿ ಆರ್ಥಿಕ ಹಾಗೂ ಇನ್ನಿತರ ಸೇವಾ ಸೌಲಭ್ಯಗಳನ್ನು ನೀಡಬೇಕು, ಶಿಕ್ಷಕರ ಶೇ. 20ರಷ್ಟು ವರ್ಗಾವಣೆ ಕೈ ಬಿಡಬೇಕು ಹಾಗೂ ಎಸ್‌ಎಸ್‌ಎ ಶಿಕ್ಷಕರಿಗೆ ಸಾಮಾನ್ಯ ಅನುದಾನದಡಿ ಸೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಶಿಕ್ಷಕರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ನ್ಯಾಯಯುತವಾದ ಪ್ರಾಥಮಿಕ ಶಿಕ್ಷಕರ ಬೇಡಿಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.