Advertisement

ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕರಿಸಿ

11:31 AM Aug 28, 2019 | Team Udayavani |

ಯಾದಗಿರಿ: ಗಣೇಶ ಚತುರ್ಥಿ ಪ್ರಯುಕ್ತ ಜಿಲ್ಲಾದ್ಯಂತ ಗಣೇಶ ಪ್ರತಿಮೆ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ ಸಂಘ-ಸಂಸ್ಥೆಗಳು, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಮಿತಿಗಳು ಹಾಗೂ ಸಾರ್ವಜನಿಕರು ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಅದೇ ರೀತಿ ಮೊಹರಂ ಕೂಡ ಶಾಂತಿ, ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮನವಿ ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೆಪ್ಟೆಂಬರ್‌ 2ರಂದು ಗಣೇಶ ಚತುರ್ಥಿ ಮತ್ತು ಸೆ. 10ರಂದು ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣೇಶ ಪ್ರತಿಮೆಯನ್ನು ರಸ್ತೆ ಅಥವಾ ರಸ್ತೆ ಬದಿಯಲ್ಲಿ ಕೂಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡಬಾರದು. ಮೂರ್ತಿ ಪ್ರತಿಷ್ಠಾಪಿಸಲು ಪರವಾನಗಿ ಪಡೆಯಲು ಆಗಸ್ಟ್‌ 30ರಿಂದ ಯಾದಗಿರಿ ನಗರ ಪೊಲೀಸ್‌ ಠಾಣೆ ಮತ್ತು ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಲಾಗುವುದು. ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಅನುಮತಿ ದೊರೆಯಲಿದೆ. ಗಣೇಶ ಮೂರ್ತಿ ಕೂಡಿಸುವ ಪ್ರತಿಯೊಂದು ಸ್ಥಳದಲ್ಲಿ 5ರಿಂದ 10 ಜನ ಸ್ವಯಂ ಸೇವಕರ ಸಮಿತಿಯನ್ನು ರಚಿಸಿಕೊಂಡು ಸಂಬಂಧಪಟ್ಟ ತಹಶೀಲ್ದಾರರು ಮತ್ತು ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದ ಹತ್ತಿರ ಮಸೀದಿ ಇದ್ದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪಿಒಪಿ ಗಣೇಶ ನಿಷೇಧ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ)ನಿಂದ ತಯಾರಿಸಿದ ಮತ್ತು ರಾಸಾಯನಿಕ ಬಣ್ಣಗಳಿಂದ ಲೇಪಿತವಾದ ಮೂರ್ತಿಗಳನ್ನು ತಯಾರಿಸಬಾರದು ಹಾಗೂ ಪ್ರತಿಷ್ಠಾಪಿಸಬಾರದು. ಇಂತಹ ಮೂರ್ತಿಗಳಿಂದ ಜಲಮೂಲಗಳು ಮಲೀನವಾಗುವ ಜೊತೆಗೆ ಜಲಚರ ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಸಲಹೆ ನೀಡಿದರು.

ಡಿ.ಜೆ ಬಳಕೆ ನಿಷೇಧ: ಬೆಳಗ್ಗೆ 6ರಿಂದ ರಾತ್ರಿ 10:00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕು. ಮುಸ್ಲಿಮರು ಪ್ರಾರ್ಥನೆ ಮಾಡುವ ಸ್ಥಳದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದರೆ ಪ್ರಾರ್ಥನೆ ಮಾಡುವ ವೇಳೆಯಲ್ಲಿ ಧ್ವನಿವರ್ಧಗಳನ್ನು ಸಣ್ಣ ಧ್ವನಿಯಲ್ಲಿ ಬಳಸಬೇಕು. ಇನ್ನು ಜಿಲ್ಲೆಯಾದ್ಯಂತ ಮೂರ್ತಿ ಕೂಡಿಸುವ ಸ್ಥಳಗಳಲ್ಲಿ ಮತ್ತು ಮೆರವಣಿಗೆಯಲ್ಲಿ ಅತಿ ಹೆಚ್ಚು ಶಬ್ದ ಹೊಂದಿಲ್ಲದ ಧ್ವನಿವರ್ಧಕ ಬಳಸಬಹುದು. ಹೆಚ್ಚಿನ ಶಬ್ದ ಉಂಟು ಮಾಡುವ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದರು.

ಗಣೇಶ ಪ್ರತಿಮೆಗಳನ್ನು ಕೂಡಿಸಿದ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ಗಾಗಿ ಪೊಲೀಸ್‌ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಎಲ್ಲಾ ತಾಲೂಕುಗಳಲ್ಲಿ ಶಾಂತಿ ಸಭೆಯನ್ನು ನಡೆಸಬೇಕು. ಗಣೇಶ ವಿಸರ್ಜನೆಯ ದಿನಗಳಂದು ನಗರದಲ್ಲಿ ನಿರಂತರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಗಣೇಶ ಮೂರ್ತಿ ವಿಸರ್ಜನೆಯ ದಿನಗಳಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗುವುದು ಎಂದು ಹೇಳಿದರು.

Advertisement

ಯಾದಗಿರಿ ನಗರದ ಸ್ಟೇಷನ್‌ ಏರಿಯಾ ಜನರು ಕೂಡಿಸುವ ಗಣೇಶ ಪ್ರತಿಮೆಗಳನ್ನು ವಿಸರ್ಜಿಸಲು ನಗರದ ಸಣ್ಣ ಕೆರೆಯೊಂದರ ಭಾಗದ ಗುಂಡಿಯಲ್ಲಿ ನೀರು ತುಂಬಿಸಬೇಕು. ಗಣೇಶ ವಿಗ್ರಹಗಳನ್ನು ಎತ್ತಲು ಕ್ರೇನ್‌ ವ್ಯವಸ್ಥೆ ಮತ್ತು ಬೆಳಕಿಗಾಗಿ ವಿದ್ಯುತ್‌ ದೀಪ ಹಾಗೂ ಜನರೇಟರ್‌ ವ್ಯವಸ್ಥೆ ಮಾಡುವಂತೆ ನಗರಸಭೆ ಪೌರಾಯುಕ್ತರು ಹಾಗೂ ತಹಶೀಲ್ದಾರರಿಗೆ ತಿಳಿಸಿದರು. ಅದರಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು.

ಶಾಂತಿ ಪಾಲನೆಗೆ ಬಹುಮಾನ: ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಣೆ ಮಾಡುವ ಸಮಿತಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಥಮ ಬಹುಮಾನವಾಗಿ 10 ಸಾವಿರ ರೂ., ದ್ವಿತೀಯ ಬಹುಮಾನವಾಗಿ 8 ಸಾವಿರ ರೂ., ಬಹುಜನ ಸಮಾಜ ಪಾರ್ಟಿ ಜಿಲ್ಲಾ ಅಧ್ಯಕ್ಷ ತಜಮುಲ್ ಹುಸೇನ್‌ ಮತ್ತು ತೃತೀಯ ಬಹುಮಾನವಾಗಿ 6 ಸಾವಿರ ರೂ.ಗಳನ್ನು ಕೋಲಿ ಸಮಾಜದ ಮುಖಂಡ ಮೌಲಾಲಿ ಅನಪುರ ಅವರು ನೀಡುವುದಾಗಿ ಸಭೆಯಲ್ಲಿ ತಿಳಿಸಿದರು. ಅದೇ ರೀತಿ ಪೊಲೀಸ್‌ ಇಲಾಖೆಯಿಂದ 7 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು. ಸಮಿತಿ ಮೂಲಕ ಆಯ್ಕೆಯಾಗುವ ಗಣೇಶೋತ್ಸವ ಸಮಿತಿಗಳಿಗೆ ಕನ್ನಡ ರಾಜ್ಯೋತ್ಸವದಂದು ಬಹುಮಾನ ವಿತರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನಾವಣೆ ಮಾತನಾಡಿ, ವಾಟ್ಸ್‌ಆ್ಯಪ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ, ಸಾರ್ವಜನಿಕರ ಶಾಂತಿಗೆ ಭಂಗ ತರುವಂತಹ ಯಾವುದೇ ರೀತಿಯ ಭಾವಚಿತ್ರಗಳು ಹಾಗೂ ವಿಡಿಯೋಗಳನ್ನು ರವಾನಿಸಬಾರದು. ಇಂತಹ ಪ್ರಕರಣಗಳು ಕಂಡು ಬಂದರೆ ಪೊಲೀಸ್‌ ಕಂಟ್ರೋಲ್ ರೂಮ್‌ ದೂರವಾಣಿ ಸಂಖ್ಯೆ 94808 03600 ಗೆ ಮಾಹಿತಿ ನೀಡಬೇಕು. ಕಾನೂನು ಸುವ್ಯವಸ್ಥೆ ಹದಗೆಡಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ವಿದ್ಯುತ್‌ ತಂತಿಗಳಿಗೆ ಕೊಂಡಿ ಹಾಕುತ್ತಾರೆ. ಈ ಸಂದರ್ಭದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಕಮಿಟಿ ಹಾಗೂ ಇತರೆ ಸಂಘದವರು ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ ವಂತಿಗೆ/ ದೇಣಿಗೆ ರೂಪದಲ್ಲಿ ಹಣ ಪಡೆಯಬಾರದು. ಕೋಮು ಗಲಭೆೆಗೆ ಪ್ರಚೋದನೆ ನೀಡುವ ಗೀತೆಗಳನ್ನು ಹಾಕುವಂತಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಡಿವೈಎಸ್‌ಪಿ ಯು. ಶರಣಪ್ಪ, ಪೌರಾಯುಕ್ತ ರಮೇಶ ಸುಣಗಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸಣ್ಣವೆಂಕಟೇಶ ಸನಬಾಳ, ಭಾವೈಕ್ಯತಾ ಸಮಿತಿ ಅಧ್ಯಕ್ಷ ಬಾಬು ದೋಖಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಸಾಹಿತಿ ಅಯ್ಯಣ್ಣ ಹುಂಡೇಕಾರ, ಗಣೇಶ ಭಾಪಕರ್‌, ಬೈತುಲ್ ಮಾಲ್ ಅಧ್ಯಕ್ಷ ಲಾಯಕ್‌ ಹುಸೇನ್‌ ಬಾದಲ್, ಗುಲಾಮ್‌ ಸಮದಾನಿ ಮೂಸಾ, ನಿಯಾಜ್‌ ಅಹ್ಮದ್‌, ಗುಲಾಮ್‌ ಜಿಲಾನಿಸಾಬ್‌ ಅಪಘಾನಿ, ಇನಾಯತ್‌ ಉರ್‌ ರೆಹಮಾನ್‌, ಮೊಹ್ಮದ್‌ ಅಬ್ದುಲ್ ಕರೀಮ್‌ ನಾಲ್ವರಿ, ಅಬ್ದುಲ್ ಕರೀಮ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನದಿಯಲ್ಲಿ ಮೂರ್ತಿ ವಿಸರ್ಜನೆ ಬೇಡ
ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಭೀಮಾ, ಕೃಷ್ಣಾ ನದಿ ಹಾಗೂ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬಾರದು. ವಿಸರ್ಜನೆ ಸಮಯದಲ್ಲಿ ಪೊಲೀಸ್‌ ಇಲಾಖೆ ನಿರ್ದೇಶಿಸುವ ಮಾರ್ಗದಲ್ಲೇ ಮೆರವಣಿಗೆ ನಡೆಸಬೇಕು. ವಿಸರ್ಜನೆ ಮಾಡುವ ಸ್ಥಳಕ್ಕೆ 8-10 ಜನರು ಮಾತ್ರ ಹೋಗಬೇಕು. ಹೋಗುವವರು ತಮ್ಮ ಹೆಸರು ಮತ್ತು ವಯಸ್ಸಿನ ವಿವರವನ್ನು ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ನೀಡಬೇಕು. ಮೂರ್ತಿಗಳನ್ನು ವಿಸರ್ಜಿಸುವ 3, 5, 7, 9 ಹಾಗೂ 11ನೇ ದಿವಸಗಳಂದು ವಿಸರ್ಜನೆಯ ಸ್ಥಳದಲ್ಲಿ ಆಂಬ್ಯುಲೆನ್ಸ್‌ ಮತ್ತು ಅಗ್ನಿ ಶಾಮಕ ವಾಹನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.