ಅನೀಲ ಬಸೂದೆ
ಯಾದಗಿರಿ: ಜಿಲ್ಲೆಯಾಗಿ 10 ವರ್ಷ ಕಳೆದರೂ ಈರುಳ್ಳಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದೇ ರೈತರು ಬೆಳೆದ ಅಲ್ಪ ಬೆಳೆಯೂ ಅನ್ಯ ಜಿಲ್ಲೆಗೆ ರಫ್ತಾಗುತ್ತಿದ್ದು, ಜಿಲ್ಲೆಯಲ್ಲಿ ಈರುಳ್ಳಿಗೆ ಅಭಾವ ಉಂಟಾಗಿದೆ.
ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿದ್ದರೂ ಇಲ್ಲಿ ಯಾವೊಬ್ಬ ರೈತರು ಮಾರಾಟಕ್ಕೆ ತರುವುದಿಲ್ಲ. ನೆರೆ ಜಿಲ್ಲೆ ರಾಯಚೂರಿನಲ್ಲಿ ಮಾರುಕಟ್ಟೆ ಸೌಕರ್ಯ ಇರುವುದರಿಂದ ಜಿಲ್ಲೆಯ ರೈತರು ಅಲ್ಲಿ ಮಾರಾಟ ಮಾಡಿದರೆ, ಜಿಲ್ಲೆಗೆ ಕಲಬುರಗಿ, ಮಹಾರಾಷ್ಟ್ರದಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಇದೆ.
ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಕೇವಲ 81 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿರುವ ಕುರಿತು ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ. ಈರುಳ್ಳಿ ಬೆಳೆ ಲಾಟರಿಯಿದ್ದಂತೆ. ಕೆಲವೊಮ್ಮೆ ಹೆಚ್ಚಿನ ದರ ಇದ್ದರೇ, ಇನ್ನು ಕೆಲವು ಸಂದರ್ಭದಲ್ಲಿ ಅದನ್ನು ಕೇಳುವವರೇ ಇಲ್ಲದಂತೆ 500ರಿಂದ ಒಂದು ಸಾವಿರ ರೂ.ಗೆ ಮಾರಾಟ ಮಾಡಿ, ಹೂಡಿದ ಬಂಡವಾಳವೂ ಕೈ ಸೇರದೆ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಾರೆ. ಹೀಗಾಗಿ ಈರುಳ್ಳಿ ಬೆಳೆಯುವುದಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಮಹರಾಷ್ಟ್ರದಲ್ಲಿ ಸುರಿದ ಮಹಾ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಈರುಳ್ಳಿ ಅಭಾವಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಏಕಾಏಕಿ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದ್ದು, ಬೇಡಿಕೆ ಹೆಚ್ಚಾಗಿದೆ. ಇದ್ದ ಹಳೆ ಬೆಳೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದಕ್ಕೆ ಕೆ.ಜಿ.ಒಂದಕ್ಕೆ 120 ರೂ. ಬಂದೊದಗಿದೆ. ಜಿಲ್ಲೆಯ ತರಕಾರಿ ಮಾರಾಟಗಾರರು ಬೇರೆ ಕಡೆಯಿಂದ ಬಂದ ಈರುಳ್ಳಿಯನ್ನೇ ಖರೀದಿಸಿ ಚಿಲ್ಲರೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವುದಕ್ಕೆ ಇನ್ನೂ ಒಂದು ತಿಂಗಳಿಗೂ ಹೆಚ್ಚಿನ ಸಮಯವಿದೆ. ಜಿಲ್ಲೆಯಲ್ಲಿ ಮಾರುಕಟ್ಟೆ ಸೌಲಭ್ಯವಿಲ್ಲದೇ ರೈತರು ಬೆಳೆದ ಹತ್ತಿಯೂ ದಲ್ಲಾಳಿಗಳ ಪಾಲಾಗಿದೆ. ಅಲ್ಪಸ್ವಲ್ಪ ಬೆಳೆದ ಈರುಳ್ಳಿಯನ್ನು ರಾಯಚೂರಗೆ ತೆರಳಿ ಮಾರುವ ಪರಿಸ್ಥಿತಿಯಿದೆ. ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾದರೇ, ರೈತರು ಈರುಳ್ಳಿ ಬೆಳೆಯಲು ಮುಂದಾಗಬಹುದು.
.
ಮಲ್ಲಿಕಾರ್ಜು ಸತ್ಯಂಪೇಟ,
ರೈತ ಮುಖಂಡ