ಯಾದಗಿರಿ: ಉತ್ತರ ಕರ್ನಾಟಕದ ಮೊದಲ ಸರ್ಕಾರಿ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕಾಗಿ ಜಿಲ್ಲೆಯಲ್ಲಿ ಸ್ಥಳ ಹುಡುಕಾಟ ನಡೆದಿದೆ. ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ 2011ರಿಂದಲೇ ಸ್ಥಳ ಹುಡುಕಾಟ ನಡೆದಿದ್ದು, ಆಗಿನ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ ನಗರದ ಹೊರ ವಲಯದಲ್ಲಿ ಭೀಮಾ ನದಿ ಸಮೀಪ ಸ್ಥಳ ಗುರುತಿಸಿದ್ದರು. ಆದರೆ ಇದು ಸರ್ಕಾರದ ಇನಾಮು ಜಮೀನಾಗಿದ್ದರಿಂದ ಅದನ್ನು ಉಪಯೋಗಿಸಲು ಬರಲ್ಲ ಎಂಬುದನ್ನು ಮನಗಂಡು ಬೇರೆ ಸ್ಥಳಕ್ಕಾಗಿ ಹುಡುಕಾಟ ಆರಂಭಿಸಲಾಗಿತ್ತು. ಈಗಿನ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಪ್ರಕೃತಿ ಚಿಕಿತ್ಸಾ ಕೇಂದ್ರದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದು, ಆರೋಗ್ಯ ಇಲಾಖೆ ಆಯುಕ್ತರನ್ನು ಸ್ವತಃ ಭೇಟಿಯಾಗಿರುವ ಬಗ್ಗೆ ಮಾಹಿತಿಯಿದೆ.
Advertisement
ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಈ ವಿಷಯಕ್ಕೆ ಆದ್ಯತೆ ನೀಡಿದ್ದು, ತಮ್ಮದೇ ಸರ್ಕಾರ ಇರುವುದರಿಂದ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಪ್ತರಾಗಿರುವುದರಿಂದ ಪ್ರಕೃತಿ ಚಿಕಿತ್ಸಾ ಕೇಂದ್ರ ಘೋಷಣೆ ಮಾಡಿಸಲು ಉತ್ಸುಕರಾಗಿದ್ದಾರೆ. ಶಹಾಪುರ ತಾಲೂಕಿನ ರಾಜ್ಯ ಹೆದ್ದಾರಿ ಬಳಿಯ ಮನಗನಾಳ ಹತ್ತಿರ ಸ್ಥಳ ಪರಿಶೀಲನೆ ನಡೆಯುತ್ತಿದ್ದು, 19.13 ಎಕರೆ ಸ್ಥಳ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಕೇವಲ 9 ಎಕರೆ ಮಾತ್ರ ಬಳಸಬಹುದು ಎಂಬುದನ್ನು ಕಂದಾಯ ಇಲಾಖೆ ಮೂಲಗಳು ಹೇಳುತ್ತಿವೆ.