Advertisement

ಮೈಲಾಪುರ ಮಲ್ಲಯ್ಯನ ಜಾತ್ರೆಗೆ ಸಿದ್ಧತೆ

12:33 PM Jan 05, 2020 | Naveen |

ಯಾದಗಿರಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಮೈಲಾಪುರದ ಮಲ್ಲಯ್ಯನ ಜಾತ್ರೆ ಜ.12ರಿಂದ 18ರ ವರೆಗೆ ಜರುಗಲಿದ್ದು, ಜ.14ರಂದು ಮಕರ ಸಂಕ್ರಮಣ ದಿನ ಮಲ್ಲಯ್ಯನ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಹೀಗಾಗಿ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಈ ಮಧ್ಯೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದೆ. ಪ್ಲಾಸ್ಟಿಕ್‌ ಮುಕ್ತವಾಗಿ ರಾಜ್ಯಕ್ಕೆ ಜಾತ್ರೆ ಮಾದರಿಯಾಗಲಿ ಎನ್ನುವ ಮಾತುಗಳು ಪರಿಸರ ಪ್ರೇಮಿಗಳಿಂದ ಕೇಳಿಬರುತ್ತಿದೆ.

Advertisement

ಜಾತ್ರೆ ನಡೆಯುವ ಸ್ಥಳ ಇಕ್ಕಟ್ಟಿನಿಂದ ಕೂಡಿದ್ದು, ಅಕ್ಕ ಪಕ್ಕ ಸ್ಥಳೀಯರು ಅವರ ಜಾಗದಲ್ಲಿ ಮಳಿಗೆಗಳನ್ನು ಹಾಕಲು ಅವಕಾಶ ನೀಡುತ್ತಿರುವುದು ಜಾತ್ರೆಗೆ ಬರುವ ಭಕ್ತರು ನೂಕುನುಗ್ಗಲಿನಲ್ಲಿ ತೊಂದರೆ ಅನುಭವಿಸುವಂತಾಗಿದೆ. ದೇವಸ್ಥಾನ ಮುಖ್ಯದ್ವಾರದ ಸಮೀಪದಲ್ಲಿಯೇ ಮಳಿಗೆ ನಿರ್ಮಾಣದಿಂದ ತೀವ್ರ ಅಡೆತಡೆಯಾಗುತ್ತಿರುವುದು ಇದರಿಂದ ಭಕ್ತರಿಗೆ ಮುಕ್ತಿ ದೊರಕಿಸಿ ಸುಸೂತ್ರವಾಗಿ ಜಾತ್ರೆ ನಡೆಯಲು ಜಿಲ್ಲಾಡಳಿತ ಅನುಕೂಲ ಮಾಡಬೇಕಿದೆ.

ಮುಖ್ಯ ಪ್ರವೇಶ ದ್ವಾರದಲ್ಲಿಯೇ ತೆಂಗಿನಕಾಯಿ ಒಡೆಯುವುದರಿಂದ ಆ ನೀರು ರಸ್ತೆಗೆ ಹರಿದು ಚರಂಡಿ ಸೇರುತ್ತಿವೆ. ಅಲ್ಲದೇ ತೆಂಗಿನಕಾಯಿ ಸಿಪ್ಪೆ ಜನರ ಕಾಲಲ್ಲಿ ಬರುವುದು ಭಕ್ತಿಯಿಂದ ದೇವರಿಗೆ ಅರ್ಪಿಸಿದ ತೆಂಗಿನ ಕಾಯಿಗಳನ್ನು ತುಳಿದುಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದರಿಂದ ಈ ಬಾರಿ ಹೊನ್ನಕೆರೆ ಕಡೆಯ ದ್ವಾರದಲ್ಲಿ ತೆಂಗಿನಕಾಯಿ ಒಡೆಯುವುದಕ್ಕೆ ಅವಕಾಶ ಕಲ್ಪಿಸುವ ತಯಾರಿ ನಡೆಸಲಾಗುತ್ತಿದೆ.

ಹೆದ್ದಾರಿಗೆ ಮುಖ್ಯದ್ವಾರ ನಿರ್ಮಾವಾಗಲಿ: ಜಿಲ್ಲೆಯ ಮೊದಲ ದರ್ಜೆಯ ದೇವಸ್ಥಾನಗಳಲ್ಲೊಂದಾಗಿರುವ ಮೈಲಾಪುರ ಮೈಲಾರಲಿಂಗೇಶ್ವರ ಶಹಾಪುರ- ಹೈದರಾಬಾದ್‌ ರಾಜ್ಯ ಹೆದ್ದಾರಿ (ರಾಮಸಮುದ್ರ) ಹೊರವಲಯದಲ್ಲಿ ದೇವಸ್ಥಾನದ ಮುಖ್ಯ ಕಮಾನು ನಿರ್ಮಾಣ ಮಾಡಬೇಕು ಎನ್ನುವುದು ಭಕ್ತರ ಬೇಡಿಕೆಯಾಗಿದೆ.

ಹೊನ್ನಕೆರೆಯಲ್ಲಿ ಕಲುಷಿತ ನೀರು: ಹಲವು ವರ್ಷಗಳಿಂದ ತೀವ್ರ ಬರ ಎದುರಾಗಿರುವುದರಿಂದ ಹೊನ್ನಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಿದೆ. ಈಗಾಗಲೇ ಕೆರೆಯಲ್ಲಿನ ಹೂಳು ತೆಗೆಯಲಾಗಿದ್ದು, ನೀರು ಕಲುಷಿತವಾಗಿರುವುದು ಸ್ನಾನಕ್ಕೆ ಯೋಗ್ಯವಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಹಾಗಾಗಿ ಭಕ್ತರ ಸ್ನಾನಕ್ಕಾಗಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ನಲ್ಲಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದಕ್ಕೂ ಮುನ್ನೆಚ್ಚರಿಕೆಯಾಗಿ ನಳದ ನೀರಿನಲ್ಲಿಯೇ ಸ್ನಾನ ಮಾಡುವುದು ಸೂಕ್ತ.

Advertisement

ಎಲ್ಲೆಂದರಲ್ಲಿ ಬಯಲು ನಿಲ್ಲಲಿ: ಜಾತ್ರೆಯಲ್ಲಿ ಭಕ್ತರಿಗೆ ಶೌಚಗೃಹಗಳನ್ನು ನಿರ್ಮಿಸಲಾಗಿದ್ದರೂ ಅದನ್ನು ಸಮರ್ಪಕ ಬಳಕೆಯಾಗುತ್ತಿಲ್ಲ. ಜನರು ಎಲ್ಲೆಂದರಲ್ಲಿ ಬಯಲಿಗೆ ತೆರಳುವುದು ಜಾತ್ರೆ ಬಳಿಕ ಗ್ರಾಮವೆಲ್ಲ ಗಬ್ಬು ನಾರುವಂತಾಗುತ್ತದೆ. ಹಾಗಾಗಿ ಬಯಲು ಸಂಪೂರ್ಣ ನಿಯಂತ್ರಿಸಲು ಜನರಲ್ಲಿ ಅಗತ್ಯ ಜಾಗೃತಿ ಮೂಡಿಸಲು ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕಿದೆ.

ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಿ: ಈಗಾಗಲೇ ಕಳೆದ ವರ್ಷದಿಂದ ಜಾತ್ರೆಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ ಆದೇಶ ಹೊರಡಿಸಿದರೂ ಅದು ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಇದಕ್ಕೆ ವಿಶೇಷ ಕಾಳಜಿವಹಿಸಿ ಪ್ಲಾಸ್ಟಿಕ್‌ ಮುಕ್ತವಾಗಿಸಿ ರಾಜ್ಯದಲ್ಲೆಯೇ ಮಾದರಿ ಜಾತ್ರೆಯನ್ನಾಗಿಸಬೇಕು ಎನ್ನುವುದು ಪರಿಸರ ಸ್ನೇಹಿಗಳ ಮಾತು.

ಅಧಿಕಾರಿಗಳು ಭೇಟಿ
ಈಗಾಗಲೇ ದೇವಸ್ಥಾನದ ಜವಾಬ್ದಾರಿ ಹೊತ್ತಿರುವ ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಹಲವು ಬಾರಿ ಭೇಟಿ ನೀಡಿ ಪರಿಶೀಲನೆ ನಡಿಸಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಅಲ್ಲದೇ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಸುರಕ್ಷತಾ ಕ್ರಮ ಮತ್ತು ಭದ್ರತೆ ಕುರಿತು ಪರಿಶೀಲನೆ ನಡೆಸಿದ್ದಾರೆ.

ಜಾತ್ರೆಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಗರ್ಭಗುಡಿ ಬಳಿ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಒಂದು ಯಾತ್ರಿ ನಿವಾಸವಿದೆ. ಇನ್ನೊಂದು ಕಾಮಗಾರಿ ಪ್ರಗತಿಯಲ್ಲಿದೆ. ಸ್ನಾನಕ್ಕೆ ನೀರಿನ ವ್ಯವಸ್ಥೆ, ಮಹಿಳೆಯರಿಗೆ ಬಟ್ಟೆ
ಬದಲಿಸುವ ಪ್ರತ್ಯೇಕ ವ್ಯವಸ್ಥೆ, ಈ ಹಿಂದೆಯೇ ಶೌಚಾಲಯಗಳ ನಿರ್ಮಾಣವಾಗಿದೆ. ಭಕ್ತರಿಗೆ ಅನುಕೂಲವಾಗುವ ಎಲ್ಲ ಕ್ರಮ ಕೈಗೊಳ್ಳಲಾಗುವುದು.
ಚನ್ನಮಲ್ಲಪ್ಪ ಘಂಟಿ,
ತಹಶೀಲ್ದಾರ್‌, ಯಾದಗಿರಿ

Advertisement

Udayavani is now on Telegram. Click here to join our channel and stay updated with the latest news.

Next