Advertisement

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲಿ

03:54 PM Sep 22, 2019 | Naveen |

ಯಾದಗಿರಿ: ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸವಿದ್ದು, ಯಾದಗಿರಿ ಮುಂದುವರೆದ ಜಿಲ್ಲೆಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಶ್ರಮಿಸಬೇಕು ಎಂದು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವರಿ ಸಚಿವ ಪ್ರಭು ಚೌವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಹುದ್ದೆಗಳು ಮತ್ತು ಖಾಲಿ ಇರುವ ಹುದ್ದೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು ಮಾಹಿತಿ ಪಡೆದರು.

ಕೆಲವರು ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಂದ ಯಾದಗಿರಿಗೆ ಬರುತ್ತಿರುವುದಾಗಿ ತಿಳಿದು ಬಂದಿದೆ. ಜಿಲ್ಲಾಡಳಿತ ಭವನದ ಹಿಂದುಗಡೆ ನೌಕರರಿಗಾಗಿ ನಿರ್ಮಿಸಿದ ವಸತಿ ಗೃಹಗಳಲ್ಲಿ ವಾಸವಿರಬೇಕು. ಸರ್ಕಾರಿ ವೇಳಾ ಪಟ್ಟಿ ಅನುಸಾರ ಕಚೇರಿಗೆ ಬರಬೇಕು. ಇಲಾಖೆ ಮುಖ್ಯಸ್ಥರು ಬಯೋಮೆಟ್ರಿಕ್‌ ಹಾಜರಾತಿಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಕುಂದು ಕೊರತೆ, ಸಮಸ್ಯೆಗಳ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ನಾವು ಅವರ ಕೆಲಸ ಮಾಡಿಕೊಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಪ್ರತಿಯೊಂದು ಇಲಾಖೆಯನ್ನು ಖುದ್ದಾಗಿ ಪರಿಶೀಲಿಸುತ್ತೇನೆ. ಹಾಜರಾತಿ ಕಡ್ಡಾಯವಾಗಿರಬೇಕು. ಕೆಲ ಕಚೇರಿಗಳಲ್ಲಿ ಮಧ್ಯಾಹ್ನದ ಹಾಜರಾತಿಯನ್ನು ಬೆಳಗ್ಗೆಯೇ ಹಾಕುತ್ತಿರುವುದು ಕಂಡು ಬಂದಿದೆ. ಈ ರೀತಿ ಕಂಡು ಬಂದರೆ ಇಲಾಖೆ ಮುಖ್ಯಸ್ಥರು ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸಬೇಕು. ನಿಯಮ ಬಾಹಿರವಾಗಿ ಕೆಲಸ ಮಾಡುವ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಜಿಲ್ಲೆಯಲ್ಲಿರುವ ವಿವಿಧ ನಿಗಮಗಳಿಗೆ ಬೇರೆ ಜಿಲ್ಲೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದರಿಂದ ನಿಗಮಗಳ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮತ್ತು ಪ್ರಗತಿ ಪರಿಶೀಲನೆಗೆ ತೊಂದರೆಯಾಗುತ್ತಿದೆ. ಕಾರಣ ಜಿಲ್ಲೆಯ ವಿವಿಧ ನಿಗಮಗಳಿಗೆ ಜಿಲ್ಲೆಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪ್ರಭಾರ ವಹಿಸಲಾಗುವುದು ಎಂದು ತಿಳಿಸಿದರು.

Advertisement

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಪಹಣಿ ಮತ್ತು ಸಾಲ ಹೊಂದಿದ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಎಷ್ಟೋ ರೈತರ ಹೆಸರಿನಲ್ಲಿ ಪಹಣಿ ಮತ್ತು ಸಾಲ ಇರುವುದಿಲ್ಲ. ಅವರ ಹಿರಿಯರು ಮತ್ತು ಪೋಷಕರ ಹೆಸರಿನಲ್ಲಿರುತ್ತದೆ. ಹಾಗಾಗಿ, ಅವರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ತಿರಸ್ಕರಿಸಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಎಲ್ಲಾ ರೈತರ ಪ್ರಕರಣಗಳಿಗೂ ಪರಿಹಾರ ಸಿಗುವಂತಾಗಬೇಕು ಎಂದು ಹೇಳಿದರು.

ಸಚಿವರು ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದರು.

ಸುರಪುರ ತಾಲೂಕಿನ ತಳ್ಳಳ್ಳಿ ಬಿ ಮತ್ತು ಯಕ್ತಾಪುರ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗನೂರ, ಎಂ.ಬೊಮ್ಮನಳ್ಳಿ, ಕಾಚಾಪುರ ಹಾಗೂ ಯಕ್ತಾಪುರ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗ‌ಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಇ ರಾಜ್‌ಕುಮಾರ ಪತ್ತಾರ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಅರಣ್ಯ ಇಲಾಖೆ ಅಧಿ ಕಾರಿ ಆಗಮಿಸದೇ ಅದೀನ ಅಧಿಕಾರಿಗಳನ್ನು ಸಭೆಗೆ ಕಳಿಸಿದ್ದರಿಂದ, ನಿಮ್ಮ ಅಧಿಕಾರಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಬಳಿಕ ಸಭೆಗೆ ಗೈರಾದ ಅರಣ್ಯ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಶಾಸಕ ನಾಗನಗೌಡ ಕಂದಕೂರ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ, ಅಪರ ಜಿಲ್ಲಾ ಧಿಕಾರಿ ಪ್ರಕಾಶ್‌ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್‌.ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಗುರುನಾಥ ಎನ್‌. ಗೌಡಪ್ಪನವರ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next