Advertisement

ಉದ್ಯೋಗ ಕಲ್ಪಿಸಲು ಮೊದಲ ಆದ್ಯತೆ

12:06 PM Feb 29, 2020 | Naveen |

ಯಾದಗಿರಿ: ಕೌಶಲ್ಯ ಅಭಿವೃದ್ಧಿ ಇಲಾಖೆ ವೆಬ್‌ಸೈಟ್‌ ಮೂಲಕ ನೂತನ ತರಬೇತಿ ಹಾಗೂ ಕೌಶಲ್ಯಗಳ ಕುರಿತು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮರ್ಪಕ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ ಸಂಬಂಧಿಸಿದ ಇಲಾಖೆ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೌಶಲ್ಯ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾದ್ಯಂತ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತಾಂತ್ರಿಕ ಕೌಶಲ್ಯಗಳ ಬಗ್ಗೆ ಉತ್ತಮ ತರಬೇತಿ ನೀಡಿ ಅವರನ್ನು ಸಶಕ್ತಗೊಳಿಸಲು ಬೇಕಾದ ಸಮರ್ಪಕ ವ್ಯವಸ್ಥೆಗೊಳಿಸಬೇಕು. ಯುವಕ ಯುವತಿಯರಿಗೆ ಈ ಕುರಿತು ಮಾಹಿತಿ ನೀಡಿ ಸಕಲ ಸೌಲಭ್ಯ ಕಲ್ಪಿಸಬೇಕು. ತಾಂತ್ರಿಕ ಕೌಶಲ್ಯತೆ ನಿಪುಣರಾದ ಯಾರೊಬ್ಬರು ಕೆಲಸವಿಲ್ಲದೆ ಕೂಡಲು ಸಾಧ್ಯವಿಲ್ಲ. ಮುಂದಿನ ಭವಿಷ್ಯದಲ್ಲಿ ಅವರಿಗೆ ಇದು ಅನುಕೂಲವಾಗಲಿದೆ.

ಈ ಕುರಿತು ಯುವ ಸಮೂಹ ಗಮನ ಸೆಳೆಯಬೇಕು. ಇದನ್ನು ಪ್ರತಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಮೂಲಕ ಅವರನ್ನು ಈ ಕೌಶಲ್ಯ ತರಬೇತಿಯಲ್ಲಿ ಭಾಗವಹಿಸುವಂತೆ ಆಸಕ್ತಿಯ ಕೆಲಸದಲ್ಲಿ ನೈಪುಣ್ಯತೆ ಪಡೆಯಲು ತಿಳಿಸಬೇಕು ಎಂದರು.

ಯಾದಗಿರಿ ಮುಖ್ಯಮಂತ್ರಿ ಕೌಶಲ್ಯ ಕೇಂದ್ರ (ಸಿಎಂಕೆಕೆವೈ) ಹಾಗೂ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ (ಪಿಎಂಕೆಕೆವೈ)ದಿಂದ ಸಾಕಷ್ಟು ಉಪಯುಕ್ತ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತದೆ. ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

Advertisement

ರಾಜ್ಯದಲ್ಲಿ ವಿವಿಧ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ, ಅವುಗಳಲ್ಲಿ ಹೊರ ರಾಜ್ಯ ಹಾಗೂ ವಿದೇಶಿ ಕಂಪನಿಗಳೂ ಇವೆ, ಈ ಕೈಗಾರಿಕೆಗಳಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ನಿರುದ್ಯೋಗ ಯುವಕ, ಯುವತಿಯರು ಕೆಲಸ ಮಾಡಲು ಆಸಕ್ತಿ ತೋರಬೇಕು, ಕೌಶಲ್ಯಾಭಿವೃದ್ಧಿಯಲ್ಲಿ ಉತ್ತಮ ತರಬೇತಿ ಪಡೆದರೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗಾವಕಾಶ ಲಭಿಸಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಜವಳಿ ಉದ್ದಿಮೆಗಳಲ್ಲಿ ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ಅವಕಾಶ ಕಲ್ಪಿಸಿಕೊಡಬೇಕು, ಅದರೊಂದಿಗೆ ಹೆಚ್ಚು ತರಬೇತಿ ಕೇಂದ್ರಗಳನ್ನು ತೆರೆದು ಕಾಲೇಜು ಹಾಗೂ ವಿವಿಧ ಕೋರ್ಸ್‌ಗಳನ್ನು ಕಲಿತವರಿಗೆ ಕೌಶಲ್ಯಭಿವೃದ್ಧಿ ಬಗ್ಗೆ ಮನವರಿಕೆ ಮಾಡಿಸಬೇಕು. ಅಲ್ಲದೇ ಸೂಕ್ತ ತರಬೇತಿ ಕಲ್ಪಿಸಬೇಕು ಎಂದು ಸೂಚಿಸಿದರು.

ಉತ್ತಮ ತರಬೇತಿ ಪಡೆದ ಜಿಲ್ಲೆಯ ಯುವಕ ಹಾಗೂ ಯುವತಿಯರಿಗೆ ಯಾದಗಿಯಲ್ಲಿಯೇ ಕೆಲಸ ಮಾಡಲು ಮೊದಲ ಆದ್ಯತೆ ನೀಡಲಾಗುವುದು. ಜೊತೆಗೆ ಐಟಿಐ, ಪಿಟ್ಟರ್‌, ವೆಲ್ಡರ್‌ ತರಬೇತಿ ಪಡೆದವರು ದುಬೈ, ಜರ್ಮನಿ, ಸೇರಿದಂತೆ ಯಾವುದೇ ದೇಶ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ಅಕ್ಕ-ಪಕ್ಕದ ಜಿಲ್ಲೆಗಳಾದ ರಾಯಚೂರು, ಕಲಬುರಗಿಯ ಕಾರ್ಖಾನೆಗಳಲ್ಲಿ ಖಾಲಿ ಹುದ್ದೆಗಳಲ್ಲೂ ಭರ್ತಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಕೌಶಲ್ಯಭಿವೃದ್ಧಿ ತರಬೇತಿಗಳು ಪೂರ್ಣಗೊಂಡಿವೆ. ಮುಂಬರುವ ದಿನಗಳಲ್ಲಿ ನೀಡಲಾಗುವ ತರಬೇತಿಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಮುಖ್ಯಸ್ಥ ಕ್ಯಾಪ್ಟನ್‌ ಕೈಸ್ತವನಾಥ, ಕರ್ನಾಟಕ ಕೌಶಲ್ಯಭಿವೃದ್ಧಿ ಪ್ರಾಧಿಕಾರ ಸಲಹೆಗಾರ ಎಸ್‌.ಜೆ.ಅಮಲನ್‌, ಕೌಶಲ್ಯ ಅಭಿವೃದ್ಧಿ ಇಲಾಖೆ ಪ್ರಭಾರಿ ರಜನಿಕಾಂತ್‌, ಜವಳಿ ಮತ್ತು ಕೈ ಮಗ್ಗ ಇಲಾಖೆ ಸಹಾಯಕ ನಿರ್ದೇಶಕ ಅಜಿತ್‌ ನಾಯಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next