ಯಾದಗಿರಿ: ಜೀವನದಲ್ಲಿ ನುಡಿದಂತೆ ನಡೆಯದೇ ಇರುವ ಮಾತು ಬಹುದೊಡ್ಡ ಕಸಕ್ಕೆ ಸಮ ಎಂದು ಚಿತ್ರದುರ್ಗ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಹಮತ ವೇದಿಕೆ ವತಿಯಿಂದ ಆಯೋಜಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಚನಗಳು ಶರಣರ ಅನುಭಾವದ ನುಡಿಗಳಾಗಿದ್ದು, ಎಂದು ಸುಳ್ಳಾಗುವುದಿಲ್ಲ. ಇಂದು ಎಲ್ಲೆಲ್ಲೂ ಗುಡಿ ಕಟ್ಟಿಸುವ ಸ್ಪರ್ಧೆ ನಡೆಯುತ್ತಿದ್ದು, ಉತ್ತಮ ಬೆಳವಣಿಗೆಯಲ್ಲ. ಪ್ರತಿಯೊಬ್ಬರು ಬಸವಣ್ಣರ ನುಡಿಯಂತೆ ಮನೋಸ್ಥೈರ್ಯ ರೂಢಿಸಿಕೊಂಡರೆ ಮತ್ತೆ ಕಲ್ಯಾಣವನ್ನು ಕಟ್ಟಲು ಸಾಧ್ಯ ಎಂದರು.
ಮನುಷ್ಯನ ಮನಸ್ಸು ಬದಲಾವಣೆ ಮಾಡಲು ಹತ್ತು ಹಲವು ವಿಧಾನಗಳು ಇವೆ. ಆದರೆ ಎಲ್ಲಕ್ಕಿಂತ ಶ್ರೇಷ್ಠ ವಿಧಾನ ಮೊದಲು ವಚನಗಳನ್ನು ಅಧ್ಯಯನ ಮಾಡಬೇಕು. ವ್ಯಕ್ತಿಗಳಿಗೆ ಬರೀ ತನ್ನ ಸಂಪತ್ತು ಹೆಚ್ಚಳ ಮಾಡುವ ಆಸಕ್ತಿ ಬೆಳೆಯುತ್ತಿದ್ದು, ನಿಜಕ್ಕೂ ಕೂಡ ಅಪಾಯಕಾರಿ ಸಂಗತಿಯಾಗಿದೆ. ಎಲ್ಲದಕ್ಕೂ ಮಾನದಂಡ ಆಸ್ತಿ ಒಂದೇ ಅಲ್ಲ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯವಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿ ಮಾತನಾಡಿ, ಮತ್ತೆ ಕಲ್ಯಾಣ ಒಂದು ಸಮುದಾಯದ, ಸಮಾಜದ ಎಲ್ಲ ವರ್ಗವನ್ನು ಒಳಗೊಂಡು ಸಾಮರಸ್ಯ ಮೂಡಿಸುವುದೇ ಇದರ ಮುಖ್ಯ ಉದ್ದೇಶ. ಇದೊಂದು ಹೊಸ ಕಲ್ಪನೆ ಎಂದರು ತಿಳಿಸಿದರು.
ಸಮಕಾಲೀನ ಸಂದರ್ಭದಲ್ಲಿ ಶರಣರ ಪ್ರಸ್ತುತತೆ ಕುರಿತಂತೆ ಡಾ| ರಂಗರಾಜ ವನದುರ್ಗ, ಖಜಾನೆ ಅಧಿಕಾರಿ ಶೇಖ ಮಹೆಬೂಬಿ ಮಾತನಾಡಿದರು.
ಡಾ| ಭೀಮಣ್ಣ ಮೇಟಿ, ಭೀಮನಗೌಡ ಕ್ಯಾತನಾಳ, ಮೂರ್ತಿ ಅನಪುರ, ಸೋಮಶೇಖರ ಮಣ್ಣೂರ, ಇಂದೂಧರ ಸಿನ್ನೂರ, ವೀರಣ್ಣ ಬೇಲಿ, ಸಿದ್ಧರಾಜರೆಡ್ಡಿ, ಲಾಯಕ ಸುಹೇನ ಬಾದಲ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಮೌಲಾಲಿ ಅನಪುರ ಸೇರಿದಂತೆ ಹಲವು ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.