ಯಾದಗಿರಿ: ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಮುಗಿದ ಬಳಿಕ ಎಲ್ಲೆಡೆ ಮತ ಲೆಕ್ಕಾಚಾರ ಆರಂಭವಾಗಿದೆ.
ಎಲ್ಲಿ ಯಾರಿಗೆ ಹೆಚ್ಚಿನ ಮತ ಬರಬಹುದು. ಎಲ್ಲಿ ಯಾರ ಪ್ರಾಬಲ್ಯವಿದೆ ಎನ್ನುವ ಚರ್ಚೆ ಸಾಮಾನ್ಯವಾಗಿದೆ. ಹಾಲಿ ಸಂಸದ ಮತ್ತು ಮೈತ್ರಿ ಅಭ್ಯರ್ಥಿ ಬಿ.ವಿ. ನಾಯಕ ಅವರ ಕುರಿತು ಕ್ಷೇತ್ರದಲ್ಲಿ ಪರ ವಿರೋಧದ ಮಾತುಗಳು ಕೇಳಿಬರುತ್ತಿದ್ದವು. ಸಂಸದರಾಗಿ ಆಯ್ಕೆಯಾದ ಬಳಿಕ ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎನ್ನುವ ಕುರಿತು ಬಹಿರಂಗವಾಗಿಯೇ ಕೆಲವೆಡೆ ಅಸಮಾಧಾನ ವ್ಯಕ್ತವಾಗಿತ್ತು. ಚುನಾವಣೆ ಹೊತ್ತಲ್ಲಿ ಇಂತಹ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ನಾಯಕ ಬಳಿಕ ಮತದಾರರ ಮನಗೆದ್ದಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ.
ಚುನಾವಣೆ ಪ್ರಚಾರದಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗವನ್ನೇ ಗುರಿಯಾಸಿಕೊಂಡ ಬಿ.ವಿ. ನಾಯಕ ಹಲವೆಡೆ ಮೈತ್ರಿ ನಾಯಕರೊಂದಿಗೆ ಅಬ್ಬರದ ಪ್ರಚಾರ ನಡೆಸಿದ್ದಾರೆ. ಮಾಜಿ ಸಚಿವ, ಹಿರಿಯ ಮುಖಂಡ ಡಾ| ಎ.ಬಿ. ಮಾಲಕರೆಡ್ಡಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಾಲಕರೆಡ್ಡಿ ಅವರು ತಮ್ಮದೇ ಬೆಂಬಲಿಗ ಪಡೆ ಹೊಂದಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದೇ ಎನ್ನುವ ಚರ್ಚೆ ವ್ಯಾಪಕವಾಗಿದೆ. ಅಲ್ಲದೇ ಈ ಹಿಂದೆ ಮಾಲಕರೆಡ್ಡಿ ಶಾಸಕರಾಗಿದ್ದ ಯಾದಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವೆಂಕಟರೆಡ್ಡಿ ಮುದ್ನಾಳ ಗೆಲುವು ಸಾಧಿಸಿದ್ದಾರೆ. ಈ ಭಾಗದಲ್ಲಿ ತಮ್ಮದೇ ಹಿಡಿತ ಹೊಂದಿದ್ದು, ತಮ್ಮ ಗೆಲುವಿನ ಬಳಿಕ ರಾಯಚೂರು ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಹೆಚ್ಚಿನ ಲೀಡ್ ಕೊಡುವುದನ್ನು ಸವಾಲಾಗಿ ಸ್ವೀಕರಿಸಿ ಹಗಲು ರಾತ್ರಿ ಎನ್ನದೆ ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದರು. ಈ ಭಾಗದಲ್ಲಿ ಏನಿದ್ದರೂ ಕಮ ಲದ್ದೇ ಪಾರುಪತ್ಯ ಎನ್ನುವ ಕುರಿತು ಚರ್ಚೆಯಾಗುತ್ತಿದೆ.
ಈ ಚುನಾವಣೆಯಲ್ಲಿ ಬಿಜೆಪಿಗೆ ದೇಶದ ವಿಚಾರವೂ ಪ್ರಮುಖ ಅಸ್ತ್ರವಾಗಿತ್ತು. ಯುವಕರು, ದೇಶಾಭಿಮಾನಿಗಳು ಹಾಗೂ ಅಕ್ಷರಸ್ಥ ಮತದಾರರು ಬಿಜೆಪಿ ಪರ ಒಲವು ತಾಳಿದ್ದಾರೆ ಎನ್ನಲಾಗಿದೆ.
ಇನ್ನೊಂದು ರಾಷ್ಟ್ರೀಯ ಪಕ್ಷಗಳ ಧೊರಣೆ ವಿರೋಧಿಸುತ್ತಲೇ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷ ಕ್ಷೇತ್ರದಕ್ಕೂ ತಮ್ಮದೇ ನೀತಿಗಳನ್ನು ಮತದಾರರಿಗೆ ಮನವರಿಕೆ ಮಾಡಿದೆ. ದುಡಿಯುವ ವರ್ಗ, ರೈತ ಮತದಾರರನ್ನು ತನ್ನತ್ತ ಸೆಳೆದಿದೆ ಎನ್ನುವ ಅಂಶವೂ ತಳ್ಳಿ ಹಾಕುವಂತಿಲ್ಲ. ಚುನಾವಣೆ ಬಳಿಕ ಕ್ಷೇತ್ರದಲ್ಲಿ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿದ್ದು, ಏನಿನ್ನದ್ದರೂ ಫಲಿತಾಂಶದ ಬಳಿಕವೇ ಅಭ್ಯರ್ಥಿಗಳ ಭವಿಷ್ಯ ಬೆಳಕಿಗೆ ಬರಲಿದೆ.
ಅನೀಲ ಬಸೂದೆ