Advertisement

ಸುರಪುರದಲ್ಲಿ ಮತ ಲೆಕ್ಕಾಚಾರದ ಬೆಟ್ಟಿಂಗ್‌ ಜೋರು

12:51 PM May 02, 2019 | Naveen |

ಯಾದಗಿರಿ: ರಾಯಚೂರು ಲೋಕಸಭೆ ವ್ಯಾಪ್ತಿಯ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಪ್ರಚಾರ ಅಬ್ಬರದಿಂದ ನಡೆದು, ಈಗ ಕ್ಷೇತ್ರದೆಲ್ಲೆಡೆ ಮತ ಲೆಕ್ಕಾಚಾರ ಮತ್ತು ಬೆಟ್ಟಿಂಗ್‌ ಜೋರಾಗಿದೆ ನಡೆದಿದೆ.

Advertisement

ಚುನಾವಣೆ ಮುಗಿದ ಬಳಿಕ ಹಳ್ಳಿಕಟ್ಟೆಗಳಲ್ಲಿ ಹರಟೆ ಹೊಡೆಯುತ್ತಿರುವ ಜನ, ನಮ್ಮ ಸಂಸದನಾಗಿ ಯಾರು ದೆಹಲಿ ಸೀಟಿಗೆ ಕೂಡುತ್ತಾರೆ ಎನ್ನುವ ಕುರಿತು ಚರ್ಚೆ ನಡೆಸಿದ್ದಾರೆ. ಕ್ಷೇತ್ರದ ಗ್ರಾಮೀಣ ಭಾಗದ ಜನರು ಕಾಂಗ್ರೆಸ್‌ ಪರವೋ, ಇಲ್ಲವೇ ಒಳಮನಸ್ಸಿನಿಂದ ಬಿಜೆಪಿಗೆ ಬೆಂಬಲಿಸಿದ್ದಾರೊ, ಎಲ್ಲಿ ಎಷ್ಟು ಮತದಾನವಾಗಿದೆ. ಯಾರಿಗೆ ಲಾಭ ಯಾರಿಗೆ ನಷ್ಟ ಎಂಬೆಲ್ಲ ಕುರಿತು ಮತದಾರರು ಮತ್ತು ರಾಜಕೀಯ ನಾಯಕರು ಲೆಕ್ಕ ಹಾಕುತ್ತಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ಹಾಲಿ ಸಂಸದ ಬಿ.ವಿ. ನಾಯಕ ಮತ್ತು ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಚುನಾವಣಾ ಅಖಾಡಕ್ಕಿಳಿದಿದ್ದರು. ಅನ್ಯ ಸ್ಪರ್ಧಿಗಳತ್ತವೂ ಮತದಾರ ಚಿತ್ತ ಹರಿಸಿರಬೇಕಾ ಎನ್ನುವ ಅಂಶವು ಪ್ರಮುಖವಾಗಿ ಚರ್ಚೆ ಆಗುತ್ತಿದೆ. ಬಿ.ವಿ. ನಾಯಕ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿಲ್ಲ ಎನ್ನುವ ಕುರಿತು ಕಾಂಗ್ರೆಸ್‌ನಲ್ಲಿ ಕೊಂಚ ಭಯವೂ ಇದೆ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

ಚುನಾವಣಾ ವೇಳೆ ಇದನ್ನೆ ದಾಳವಾಗಿ ಬಳಸಿಕೊಂಡ ಬಿಜೆಪಿ ಮುಖಂಡರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡ ಬಿಜೆಪಿಗರು, ಕ್ಷೇತ್ರಕ್ಕೆ ಅಪ್ಪ, ಮಗನ ಕೊಡುಗೆ ಶೂನ್ಯ ಬಿ.ವಿ. ನಾಯಕ ನಿಷ್ಕ್ರೀಯರಾಗಿದ್ದಾರೆ ಎಂದು ಬಿಂಬಿಸಿ, ಮತದಾರರ ಮನ ಗೆಲ್ಲುವಲ್ಲಿ ಶಾಸಕ ನರಸಿಂಹ ನಾಯಕ ಯಶಸ್ವಿಯಾಗುತ್ತಾರೆ ಎನ್ನುವುದು ಚರ್ಚೆಗೆ ಎಡೆ ಮಾಡಿದೆ.

ಹುಣಸಗಿ ಪಟ್ಟಣದಲ್ಲಿ ಸ್ಟಾರ್‌ ಪ್ರಚಾರಕರನ್ನು ಕರೆಯಿಸಿ ಬೃಹತ್‌ ಸಮಾವೇಶ ಮಾಡುವ ಮೂಲಕ ಅಬ್ಬರದ ಪ್ರಚಾರ ಮಾಡಿದ್ದರು. ಅಲ್ಲದೇ ಬಿಜೆಪಿಗರು ಈ ಚುನಾವಣೆಯಲ್ಲಿ ದೇಶದ ವಿಚಾರ ಮತದಾರರ ತಲೆಗೆ ತುಂಬುವುದನ್ನು ಮರೆತಿರಲಿಲ್ಲ. ಕ್ಷೇತ್ರದಲ್ಲಿ ಹಾಲಿ ಸಂಸದರ ವಿರೋಧಿ ಅಲೆ ಕಂಡು ಬಂದಿದ್ದರಿಂದ ಈ ಚುನಾವಣೆಯಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೆಚ್ಚಾಗಿ ಪ್ರಚಾರದಲ್ಲಿ ತೊಡಗದಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಬಹುದು ಎನ್ನುವ ತೀಕ್ಷ್ಣ ಮಾತುಗಳು ಕೇಳಿಬರುತ್ತಿದೆ.

Advertisement

ಈ ಬಾರಿಯ ಲೋಕಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು, ಶಾಸಕ ರಾಜುಗೌಡರ ಪ್ರತಿಷ್ಠೆಯಾಗಿದ್ದು, ಹೈಕಮಾಂಡ್‌ ಮಟ್ಟದಲ್ಲಿ ರಾಜಾ ಅಮರೇಶ್ವರ ನಾಯಕಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ರಾಜುಗೌಡ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವ ಮೂಲಕ ಹೆಚ್ಚಿನ ಲೀಡ್‌ ಕೊಟ್ಟಲ್ಲಿ ಪಕ್ಷದಲ್ಲಿ ವರ್ಚಸ್ಸು ಹೆಚ್ಚಾಗಲಿದೆ ಎನ್ನಲಾಗಿದೆ. ಈ ಮಧ್ಯೆಯೇ ಚುನಾವಣೆ ಫಲಿತಾಂಶದ ಕುರಿತು ಕ್ಷೇತ್ರದಲ್ಲಿ ಬೆಟ್ಟಿಂಗ್‌ ಭರಾಟೆ ನಡೆದಿದ್ದು, ಬಿಜೆಪಿ, ಕಾಂಗ್ರೆಸ್‌ ಗೆಲುವಿನ ಕುರಿತು ಹಲವರು ತಮಗಿಷ್ಟದ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್‌ ನಡೆಸುತ್ತಿರುವುದು ಕಂಡು ಬಂದಿದೆ.

ಕ್ಷೇತ್ರದ ಬಹುತೇಕ ಯುವ ಮತದಾರರು, ರಾಷ್ಟ್ರ ಭಕ್ತರು, ವಿದ್ಯಾವಂತರು ಬಿಜೆಪಿಯನ್ನು ಬೆಂಬಲಿಸಿರುವ ಸಾಧ್ಯತೆಯಿದೆ ಎನ್ನುವ ಕುರಿತು ಚರ್ಚೆ ತೀವ್ರವಾಗಿದೆ. ಇದೆಲ್ಲದಕ್ಕೂ ಮೇ. 23ರ ಚುನಾವಣೆ ಫಲಿತಾಂಶದಿಂದಲೇ ಉತ್ತರ ದೊರೆಯಲಿದೆ.

ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ ಕೊಡುಗೆ ಅಪಾರವಾಗಿದೆ. ದೇಶ ರಾಜ್ಯದ ಬಡ ಜನತೆಗೆ ನಮ್ಮ ಪಕ್ಷ ನೀಡಿದಷ್ಟು ಸೌಲಭ್ಯ ಯಾವೊಂದು ಪಕ್ಷಗಳು ನೀಡಿಲ್ಲ. ಅದರಲ್ಲೂ ವಿಶೇಷವಾಗಿ ರಾಯಚೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ಬಿ.ವಿ. ನಾಯಕ ಮತ್ತು ಅವರ ತಂದೆಯವರ ಕೊಡುಗೆ ಸ್ಮರಣೀಯವಾಗಿದೆ. ನಮ್ಮ ನಾಯಕ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ನಮಗೆ ಹೆಚ್ಚು ಮತಗಳು ಬರಲಿವೆ ಎಂಬ ವಿಶ್ವಾಸವಿದೆ.
•ನಿಂಗಪ್ಪ ಬಾಚಿಮಟ್ಟಿ,
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಮೈತ್ರಿಯಿಂದ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ ಪರ ಅಲೆ ಕಂಡು ಬಂದಿದೆ. ಬಿ.ವಿ. ನಾಯಕ ಸರಳ ಸಜ್ಜಿನಿಕೆ ವ್ಯಕ್ತಿ, ಅವರ ಸರಳತೆ ಚುನಾವಣೆಯಲ್ಲಿ ಕೆಲಸ ಮಾಡಿದೆ ಎಂಬ ವಿಶ್ವಾಸವಿದೆ. ಹೀಗಾಗಿ ಜನ ಕೈ ಹಿಡಿಯುವ ಮುನ್ಸೂಚನೆ ನೀಡಿದ್ದಾರೆ.
ಮಲ್ಲಯ್ಯ ಕಮತಗಿ,
ಜೆಡಿಎಸ್‌ ತಾಲೂಕು ಅಧ್ಯಕ್ಷ

ಮೋದಿ ಸುನಾಮಿ ಅಲೆಗೆ ಈಗಾಗಲೆ ಕಾಂಗ್ರೆಸ್‌ ಪಕ್ಷ ಕೊಚ್ಚಿಕೊಂಡು ಹೋಗಿದೆ. ಕ್ಷೇತ್ರದಲ್ಲಿ ಶಾಸಕ ರಾಜುಗೌಡರು ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದಾದ್ಯಂತ ಬಿಜೆಪಿ ಅಲೆ ಕಂಡು ಬಂದಿದ್ದು, ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದೇವೆ. ಹೀಗಾಗಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಪರ ಒಲವಿದೆ.
•ಅಮರಣ್ಣ ಹುಡೇದ,
ಬಿಜೆಪಿ ತಾಲೂಕು ಅಧ್ಯಕ್ಷ

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next