Advertisement

ಸಂಸತ್‌ನಲ್ಲಿ ಖರ್ಗೆ ಮಾತನಾಡಿದರೆ ನಡುಕ

01:18 PM Apr 18, 2019 | Naveen |

ಯಾದಗಿರಿ: ಸಂಸತ್‌ನಲ್ಲಿ ಮೋದಿ ಎದುರು ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರೇ ನಡುಕ ಶುರುವಾಗುತ್ತದೆ. ಅವರಿಗೆ ಕಷ್ಟವಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಖರ್ಗೆ ಸೋಲಿಸುವುದೇ ಬಿಜೆಪಿ ಟಾರ್ಗೆಟ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

Advertisement

ಕಲಬುರಗಿ ಲೋಕಸಭೆ ಕ್ಷೇತ್ರದ ಗುರುಮಠಕಲ್‌ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸೈದಾಪುರದಲ್ಲಿ ಕಲಬುರಗಿ ಲೋಕಸಭೆ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಪರ ಬುಧವಾರ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ಪರ ಚಿಂತಿಸುವ ಅಪರೂಪದ ನಾಯಕ ಖರ್ಗೆ ಅವರು ಯಾವತ್ತು ಅಧಿಕಾರದ ಹಿಂದೆ ಬಿದ್ದವರಲ್ಲ. ಖರ್ಗೆ ಅವರಿಗಿರುವ ಪಕ್ಷ ನಿಷ್ಠೆ ಬೇರಾವ ನಾಯಕರಿಗಿಲ್ಲ ಎಂದು ಹೇಳಿದರು.

ಸೇವಾಲಾಲ್‌ ಜಯಂತಿ, ಕೋಲಿ ಸಮಾಜ ಎಸ್‌ಟಿ ಸೇರ್ಪಡೆಗೆ ಎರಡು ಬಾರಿ ಶಿಫಾರಸು, ನಿಜಶರಣ ಅಂಬಿಗರ ನಿಗಮ, ಅಂಬಿಗರ ಚೌಡಯ್ಯ ಜಯಂತಿ ಮಾಡಿದ್ದು ತಾನು. ಇದನ್ನೆಲ್ಲ ಚಿಂಚನಸೂರ ಇಲ್ಲ ಜಾಧವ ಮಾಡಿದರಾ ಎಂದು ಪ್ರಶ್ನಿಸಿದರು. ಬಿಜೆಪಿಗೆ ಮತ ಹಾಕಲು ಕಾರಣವಿರಬೇಕು. ಅವರು ಏನು ಮಾಡಿದ್ದಾರೆ ಎಂದು ಗುಡುಗಿದರು.

ಮತದಾರರು ವಿಚಾರ ಮಾಡಿ ಮತ ಚಲಾಯಿಸಬೇಕು. ಬಿಜೆಪಿಗರು ಎಲ್ಲೆಡೆ ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಕಳೆದ
5 ವರ್ಷದಲ್ಲಿ ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಲ್ಲಿದ್ದ ಚಿಂಚನಸೂರ ಧೀರ, ಶೂರ ಎನ್ನುತ್ತಿದ್ದ. ಗುತ್ತೇದಾರಗೆ ಹೌಸಿಂಗ್‌ ಬೋರ್ಡ್‌ ಅಧ್ಯಕ್ಷ ಮಾಡಿದ್ದೇವು. ಮಾಲಕರೆಡ್ಡಿ ಏಕೆ ಪಕ್ಷ ಬಿಟ್ಟರೋ ಗೊತ್ತಾಗಲಿಲ್ಲ. ಜಾಧವಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಮುಂದೆ ಮಂತ್ರಿ ಮಾಡುವುದಾಗಿಯೂ ಹೇಳಿದ್ದೇವು. ಆದರೇ ಪಕ್ಷಕ್ಕೆ ದ್ರೋಹ ಮಾಡಿರುವ ಜಾಧವಗೆ ಮಾನ, ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.

Advertisement

ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಂತ ಧೀಮಂತ ನಾಯಕ ನಿಮ್ಮ ಪ್ರತಿನಿಧಿಯಾಗಿ ಸಂಸತ್‌ ಗೆ ತೆರಳುವುದು ನಿಮ್ಮ ಹೆಮ್ಮೆಯಲ್ಲವೇ| ಹಾಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಖರ್ಗೆ ಅವರನ್ನು ಗೆಲ್ಲಿಸಿ ಪಕ್ಷಕ್ಕೆ ಚೂರಿ ಹಾಕಿದ ಜಾಧವಗೆ ಸೋಲಿಸಬೇಕು ಎಂದು
ಹೇಳಿದರು.

ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ರೈತರ ಪರ ಕಾಳಜಿಯಿಲ್ಲ. ರೈತರ ಬಗ್ಗೆ ಮಾತನಾಡುವ ನೈತಿಕತೆ ಮೋದಿಗಿಲ್ಲ. 40 ಇಂಚಿನ ಮನಮೋಹನ್‌ ಸಿಂಗ್‌ ಅವರು 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದರು. ತಾವು ಸಿಎಂ ಇರುವಾಗ 50 ಸಾವಿರದ
ವರೆಗಿನ ಸಹಕಾರ ಸಾಲ 8165 ಕೋಟಿ ಮನ್ನಾ ಮಾಡಿದೆ. ಆದರೆ 56 ಇಂಚಿನ್‌ ಸೀನಾ ಇರುವ ಮೋದಿಗೆ ಏನ್‌ ಆಗಿತ್ತು? ರೈತ ವಿರೋಧಿಗಳಿಗೆ ಮತ ಕೊಡಬೇಕೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಸಿಎಂ ಇಬ್ರಾಹಿಂ ಮಾತನಾಡಿ, ಈ ಸಲದ ಚುನಾವಣೆ ಖರ್ಗೆ ಅವರ ಚುನಾವಣೆಯಲ್ಲ. ಪ್ರಜಾಪ್ರಭುತ್ವದ ಅಸ್ತಿತ್ವದ ಚುನಾವಣೆಯಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಮನುಸ್ಮೃತಿ ಅಡಗಿದೆ. ಅವರು ಚುಕ್ಕಾಣಿ ಹಿಡಿದರೇ ಎಲ್ಲರೂ ಶೂಧ್ರರಾಗುತ್ತೇವೆ. ಐಟಿ ದಾಳಿಗಳಿಂದ ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮತ್ತೂಮ್ಮೆ ಮೋದಿ ಪ್ರಧಾನಿಯಾಗಿಬರಲ್ಲ. ಮೋದಿ ಅಂದ್ರೆ ನೀ ಹೋದಿ ಎಂದು ವ್ಯಂಗ್ಯವಾಡಿದರು.

ಬಲಿಷ್ಠ ಭಾರತ ನಿರ್ಮಾಣ ಮಾಡಬೇಕು ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಭಾರತ ಎಂದೂ ದುರ್ಬಲವಾಗಿಲ್ಲ ಬಲಿಷ್ಠವೇಯಿದೆ. ಸಂವಿಧಾನ ಮತ್ತು ದೇಶ ಉಳಿಯಲು ಖರ್ಗೆ ಅವರನ್ನು ಬೆಂಬಲಿಸಿ. ಈ ಚುನಾವಣೆ ಬಳಿಕೆ ಖರ್ಗೆ ಅವರಿಗೆ
ಡಬಲ್‌ ಶಕ್ತಿಬರುತ್ತದೆ ಎಂದು ಹೇಳಿದರು.

ಕಲಬುರಗಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ಸಲದ ಚುನಾವಣೆ ಮಹತ್ವದ್ದಾಗಿದೆ. 130 ಕೋಟಿ ಜನರ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವ ಉಳಿವಿನ ಚುನಾವಣೆಯಾಗಿದೆ ಎಂದು ಹೇಳಿದರು.

ತನ್ನ ಸೋಲು-ಗೆಲುವು ಯಾರ ಕೈಯಲ್ಲಿಲ್ಲ. ಹಣೆಬರಹ ಬರೆಯುವವರು ನನ್ನ ಕ್ಷೇತ್ರದ ಮತದಾರರು. ನಾನು ಕೆಲಸ ಮಾಡಿ ಜನರ ಮುಂದೆ ಬಂದಿದ್ದೇನೆ. ಕಲಬುರಗಿಗೆ ಮೋದಿ ಕೊಡುಗೆ
ಏನು? ನಾವು ಮಾಡುವ ಅಭಿವೃದ್ಧಿ ನಿಲ್ಲಿಸುವುದನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಕಡೇಚೂರು ರೈಲ್ವೇ ಫಿಯೆಟ್‌ ಬೋಗಿ ತಯಾರಿಕಾ ಘಟಕಕ್ಕೆ 750 ಕೋಟಿ ನೀಡಿ ಅಭಿವೃದ್ಧಿ ಮಾಡುವ ಯೋಜನೆಯಿತ್ತು. ಆದರೆ ಈ ಸರ್ಕಾರ ಹಣ ನೀಡಲಿಲ್ಲ. ಸುಳ್ಳಿನ ಸರ್ಕಾರ ಪುನಃ ಅಧಿಕಾರಕ್ಕೆ
ಬಂದರೆ ಏನು ಆಗಲ್ಲ. ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ, ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ತುನ್ನೂರ, ವಿಧಾನ ಪರಿಷತ್‌ ಮಾಜಿ ಸಭಾಪತಿ ಡೇವಿಡ್‌ ಸಿಮೆಯೋನ್‌, ಮರಿಗೌಡ ಹುಲಕಲ್‌, ರಾಘವೇಂದ್ರ ಮಾನಸಗಲ್‌, ಬಸರೆಡ್ಡಿ ಅನಪುರ, ಚಿದಾನಂದಪ್ಪ
ಕಾಳಬೆಳಗುಂದಿ, ಬಸವರಾಜ ಸ್ವಾಮಿ ಬದ್ದೇಪಲ್ಲಿ, ಶರಣಿಕ ಕುಮಾರ ಧೋಖಾ ಇದ್ದರು.

ಈಶ್ವರಪ್ಪ ಮೂರ್ಖ
ಈಶ್ವರಪ್ಪ ಒಬ್ಬ ಮೂರ್ಖ. ದೊಡ್ಡ ಮುಖ
ಇಟ್ಕೊಂಡು ಹಿಂದುಳಿದ ವರ್ಗದವರಗೆ ಒಂದು ಟಿಕೆಟ್‌ ಕೊಡಿಸಲು ಆಗಲಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಈಶ್ವರಪ್ಪ ವಿರುದ್ಧ ವಾಗ್ಧಾಳಿ ನಡೆಸಿದರು. ಬಿಜೆಪಿಗರು ಅಲ್ಪಸಂಖ್ಯಾತರಿಗೆ
ಟಿಕೆಟ್‌ ನೀಡದಿರುವ ವಿಚಾರ ಕಚೇರಿಯಲ್ಲಿ 10 ವರ್ಷ ಕಸ ಬಳಿಯಲಿ ಎನ್ನುವ ಈಶ್ವರಪ್ಪ ಯೋಗ್ಯತೆಗೆ ಒಬ್ಬ ಕುರುಬರಿಗೆ ಟಿಕೆಟ್‌ ಕೊಡಿಸಲು ಆಗಲಿಲ್ಲ. ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದು, ಗ್ರಾಪಂ ಸದಸ್ಯನಾಗಲೂ ಲಾಯಕ್‌ ಇಲ್ಲ ಎಂದು ಹೇಳಿದರು.

ಎಲ್ಲರೂ ಸೇರಿ ಪ್ರಿಯಾಂಕ್‌ ರಾಜಕೀಯಕ್ಕೆ ತಂದರು
ಬಿಜೆಪಿ ವಿರುದ್ಧ ಯಾರು ಸ್ಪರ್ಧಿಸಬೇಕು. ನಿಮ್ಮಂಥವರು ಮುಂದಾಗದಿದ್ದರೆ ಹೇಗೆ ಎಂದು ಹಲವು ನಾಯಕರು ಸೇರಿ ಪ್ರಿಯಾಂಕ್‌ ಅವರನ್ನು ರಾಜಕೀಯಕ್ಕೆ ತಂದರೂ. ಈಗ ನೋಡಿದರೆ ಪುತ್ರ ವ್ಯಾಮೋಹ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವಿರೋಧಿಗಳಿಗೆ ಖರ್ಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next