Advertisement

ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನವೇ ಬುನಾದಿ

04:12 PM Apr 11, 2019 | Naveen |

ಯಾದಗಿರಿ: ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನವೇ ಬುನಾದಿ ಆಗಿರುವುದರಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲಾದ್ಯಂತ ಏಪ್ರಿಲ್‌ 23ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ
ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮನವಿ ಮಾಡಿದರು.

Advertisement

ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬುಧವಾರ ರಾಜ್ಯ ಮುಖ್ಯ
ಚುನಾವಣಾಧಿಕಾರಿಗಳ ಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಲೋಕಸಭಾ ಚುನಾವಣೆ-2019ರ ಪ್ರಯುಕ್ತ ಏಪ್ರಿಲ್‌ 10ರಿಂದ 12ರವರೆಗೆ ಏರ್ಪಡಿಸಿರುವ ಮತದಾನ
ಜಾಗೃತಿ ಅಭಿಯಾನದ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 1,135 ಮತಗಟ್ಟೆಗಳಲ್ಲಿ ಏಪ್ರಿಲ್‌ 23ರಂದು
ಮಂಗಳವಾರ ಬೆಳಗ್ಗೆ 7:00ರಿಂದ ಸಂಜೆ 6:00ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಪ್ರಜಾತಂತ್ರದಲ್ಲಿ ಮತದಾನವೇ ಹಬ್ಬವಾಗಿದೆ. ಮತದಾರರು ಹಣ, ಮದ್ಯ ಹಾಗೂ ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗದೇ ಯೋಚಿಸಿ
ಮತ ಚಲಾಯಿಸಬೇಕು. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು. ಮತದಾನ ಮಾಡುವ ಸಮಯದಲ್ಲಿ ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೆ 11 ದಾಖಲೆಗಳ ಪೈಕಿ ಒಂದನ್ನು ಹಾಜರುಪಡಿಸಿ
ಮತ ಚಲಾಯಿಸಬಹುದು ಎಂದು ಮಾಹಿತಿ ನೀಡಿದರು.

ಚುನಾವಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿದ ಸಹಾಯವಾಣಿ-1950 ಸಂಖ್ಯೆ ದಿನದ 24 ಗಂಟೆ ಕಾರ್ಯನಿರ್ವಹಣೆಯಲ್ಲಿರುತ್ತದೆ. ಅಲ್ಲದೇ, ಕಂಟ್ರೋಲ್‌ ರೂಮ್‌ ಸಂಖ್ಯೆ: 08473-253772ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಹಾಗೂ ಮಾಹಿತಿ
ಪಡೆದುಕೊಳ್ಳಬಹುದಾಗಿದೆ. ಚುನಾವಣೆಯಲ್ಲಿ ಅಕ್ರಮ ಕಂಡುಬಂದಲ್ಲಿ ಚುನಾವಣಾ ಆಯೋಗಕ್ಕೆ ಸಾಕ್ಷಿ ಸಮೇತ ದೂರು ನೀಡಲು ಸಿ-ವಿಜಿಲ್‌ ಆ್ಯಪ್‌ ನೆರವಾಗುತ್ತದೆ. ಆ್ಯಪ್‌ ಮೂಲಕ ಸಾರ್ವಜನಿಕರು ಚಿತ್ರ ಹಾಗೂ
ವಿಡಿಯೋ ಸಹಿತ ದೂರು ನೀಡಬಹುದಾಗಿದೆ ಎಂದು ಹೇಳಿದರು.

ವಸ್ತುಪ್ರದರ್ಶನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ| ಚಂದ್ರಶೇಖರ ಕಂಬಾರ, ಖ್ಯಾತ ಕ್ರಿಕೆಟಿಗರಾದ ರಾಹುಲ್‌ ದ್ರಾವಿಡ್‌, ಪ್ಯಾರ ಓಲಿಂಪಿಯನ್‌ ಹಾಗೂ ಪದ್ಮಶ್ರೀ ಪುರಸ್ಕೃತರಾದ ಗಿರೀಶ್‌ ಎನ್‌. ಗೌಡ ಸೇರಿದಂತೆ
ಮುಂತಾದ ಗಣ್ಯರು ಮತದಾನ ಜಾಗೃತಿಗಾಗಿ ನೀಡಿದ ಹೇಳಿಕೆಗಳು, ಸಿ-ವಿಜಿಲ್‌ ಆ್ಯಪ್‌, ಚುನಾವಣಾ ಆ್ಯಪ್‌, ಸಹಾಯವಾಣಿ-1950 ಕುರಿತ ಚಿತ್ರಸಮೇತ ಮಾಹಿತಿಗಳು ಚೆನ್ನಾಗಿ ಮೂಡಿಬಂದಿವೆ. ಸಾರ್ವಜನಿಕ ಪ್ರಯಾಣಿಕರು ಪ್ರದರ್ಶನ ವೀಕ್ಷಿಸಬೇಕು. ಏಪ್ರಿಲ್‌ 23ರಂದು ಮತದಾನ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಹೇಳಿದರು.

Advertisement

ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾತನಾಡಿ, ಚುನಾವಣೆ ದಿನದಂದು ದಿವ್ಯಾಂಗರು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲ ಮತದಾರರಿಗೆ ಅನುಕೂಲವಾಗುವಂತೆ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಭಾರ ವಾರ್ತಾ ಸಹಾಯಕ ಡಿ.ಕೆ. ರಾಜರತ್ನ, ವಾರ್ತಾ ಇಲಾಖೆ ಸಿಬ್ಬಂದಿ ವಿಶ್ವರಾಧ್ಯ ಎಸ್‌.ಎಚ್‌., ಭೀಮರಾವ ದೇಸಾಯಿ, ಸಿದ್ದು ಸೇರಿದಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next