ಯಾದಗಿರಿ: ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 5 ವರ್ಷದ ಸಾಧನೆಯನ್ನು ಮನಗಂಡು ಜನ ಮತ್ತೂಮ್ಮೆ ಮೋದಿ ಅವರನ್ನು ಪ್ರಧಾನಿಯಾಗಿಸಲು ರಾಯಚೂರು ಕ್ಷೇತ್ರದಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
ನಗರದ ಗಾಂಧಿ ವೃತ್ತ ಮತ್ತು ಸುಭಾಷ ವೃತ್ತದಲ್ಲಿ ರಾಯಚೂರು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಜಯ ಹೊಂದಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ದೇಶದ ಜನರು ಕೆಲಸಗಾರರನ್ನು ಯಾವತ್ತು ಮೆರೆಯುವುದಿಲ್ಲ ಎನ್ನುವುದು ಈ ಚುನಾವಣೆಯಲ್ಲಿ ಖಾತ್ರಿಯಾಗಿದೆ. ದೇಶದ ಪ್ರತಿಯೊಬ್ಬ ಬಡವರು, ನಿರ್ಗತಕರಿಗೆ ಮೋದಿ ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೇರವಾಗಿ ಮನೆ ಬಾಗಲಿಗೆ ತಲುಪಿರುವುದರಿಂದ ಜನ ಯಾರು ದೇಶ ಮುನ್ನಡೆಸಲು ಸೂಕ್ತ ಎನ್ನುವ ತೀರ್ಮಾನವನ್ನು ತುಂಬಾ ವಿವೇಚನೆಯಿಂದ ತೆಗೆದುಕೊಂಡಿದ್ದಾರೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ಮಾತನಾಡಿ, 2014ರ ಚುನಾವಣೆಗಿಂತ ಈ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆಯಾಗಿತ್ತು. ಹೈಕ ಭಾಗದ ರಾಯಚೂರು, ಕಲಬುರಗಿ ಮತದಾರರು ಅಭಿವೃದ್ಧಿಗಾಗಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದರು.
ರಾಯಚೂರಿನಲ್ಲಿ ಈ ಹಿಂದೆ ಸಂಸದರಾಗಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು ತಿರಸ್ಕರಿಸಿ ಬಿಜೆಪಿಯ ಅಮರೇಶ್ವರ ನಾಯಕ ಅವರಿಗೆ ಮನ್ನಣೆ ನೀಡಿದ್ದು, ಮುಂದೆ ಉತ್ತಮ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದರು. ವಿಶೇಷವಾಗಿ ಕಲಬುರಗಿಯಲ್ಲಿ ಕಾಂಗ್ರೆಸ್ ಕೋಟೆಯನ್ನು ಛಿದ್ರಗೊಳಿಸಿರುವ ಮತದಾರರು ಐತಿಹಾಸಕ ಗೆಲುವಿಗೆ ನಾಂದಿ ಹಾಡಿದ್ದಾರೆ ಎಂದರು.
ಡಾ.ಜಾಧವ ಅವರನ್ನು ಗೆಲ್ಲಿಸಿದ್ದು ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ನ ಘಟಾನುಘಟಿಗಳಿಗೆ ಜನರು ಸೋಲಿನ ರುಚಿ ತೋರಿಸಿದ್ದಾರೆ ಎಂದರು.
ಈ ವೇಳೆ ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಡಾ| ಶರಣಭೂಪಾಲರೆಡ್ಡಿ, ಖಂಡಪ್ಪ ದಾಸನ, ಲಲಿತಾ ಅನಪುರ, ಡಾ| ಶರಣರೆಡ್ಡಿ ಕೋಡ್ಲಾ, ಸ್ವಾಮಿದೇವ ದಾಸನಕೇರಿ, ಗೋಪಾಲ ದಾಸನಕೇರಿ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.
ಗುರುಮಠಕಲ್ನಲ್ಲಿ ಸಂಭ್ರಮ: ಕಲಬುರಗಿ ಲೋಕಸಭೆ ವ್ಯಾಪ್ತಿಯಗೆ ಒಳಪಡುವ ಜಿಲ್ಲೆಯ ಗುರುಮಠಕಲ್ನಲ್ಲಿ ಬಿಜೆಪಿ ಅಭಿಮಾನಿ ಯುವಕರು ರಾಜಾರಮೇಶ ಗೌಡ ನೇತೃತ್ವದಲ್ಲಿ ಮುಖ್ಯಬೀದಿಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.