Advertisement

ಮತಗಟ್ಟೆ ಸ್ಥಾಪಿಸದಿದ್ದರೆ ಮತದಾನ ಬಹಿಷ್ಕಾರ

10:06 AM Apr 08, 2019 | Naveen |

ಯಾದಗಿರಿ: ಗುರುಮಠಕಲ್‌ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಸ್ಲೇಪಲ್ಲಿ ಮತ್ತು ಬಸ್ಸಾಪುರದಲ್ಲಿ ಮತಗಟ್ಟೆ ಸ್ಥಾಪಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Advertisement

ಯಾದಗಿರಿ ಜಿಲ್ಲೆಯ ಕಲಬುರಗಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಗಡಿ ಭಾಗವಾದ ಗುರುಮಠಕಲ್‌ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಗ್ರಾಮಗಳಲ್ಲಿ ಮತಗಟ್ಟೆಯೇ ಇಲ್ಲ. ಇದರಿಂದಾಗಿ ಗ್ರಾಮಸ್ಥರು ಪ್ರತಿ ಚುನಾವಣೆಯಲ್ಲಿಯೂ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗ ರಾಜ್ಯಾದ್ಯಂತ ಶೇಕಡಾವಾರು ಮತದಾನ ಹೆಚ್ಚಿಸಲು ಹಲವು ಆಯಾಮಗಳಲ್ಲಿ ಪ್ರಯತ್ನಿಸುತ್ತಿದೆ. ಆದರೆ ತಮಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತಗಟ್ಟೆ ಸ್ಥಾಪಿಸುವಲ್ಲಿ ಮುಂದಾಗಿಲ್ಲ. ಈ ಸಾರೆಯಾದರೂ ಮತಗಟ್ಟೆ ಸ್ಥಾಪಿಸಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮುಸ್ಲೇಪಲ್ಲಿಯಲ್ಲಿ ಸುಮಾರು 450ರಷ್ಟು ಮತದಾರರಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಸುಮಾರು 3 ಕಿ.ಮೀ ನಡೆದುಕೊಂಡು ಹೋಗಿ ದೇವನಹಳ್ಳಿ(ಅಮ್ಮಾಪಲ್ಲಿ) ಮಗತಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕಾಗಿದೆ. ಕ್ಷೇತ್ರದ ಬಸ್ಸಾಪುರದಲ್ಲಿಯೂ ಮತಗಟ್ಟೆ ಇಲ್ಲ. ಇಲ್ಲಿನ 200ಕ್ಕೂ ಹೆಚ್ಚು ಮತದಾರರು 3 ಕಿಮೀ ದೂರದ ತುರುಕನದೊಡ್ಡಿಗೆ ತೆರಳಿ ಮತದಾನ ಮಾಡುವ ಪರಿಸ್ಥಿತಿ ಎದುರಾಗಿದೆ.

ಗ್ರಾಮದಲ್ಲಿ ಹೆಚ್ಚಿನ ವೃದ್ಧರು, ಕಣ್ಣು ಸರಿಯಾಗಿ ಕಾಣದವರು ಇರುತ್ತಾರೆ. ಅವರು ನಡೆದುಕೊಂಡು ಬರುವುದು ಅಸಾಧ್ಯ. ಹೀಗಿರುವಾಗ ಅಧಿಕಾರಿಗಳು ನಮ್ಮ ಗ್ರಾಮದಲ್ಲಿಯೇ ಮತಗಟ್ಟೆ ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕಿತ್ತು ಎನ್ನುತ್ತಾರೆ ಗ್ರಾಮಸ್ಥರು. ಇದಕ್ಕೆ ಸಂಬಂಧಿಸಿದಂತೆ ಮಾರ್ಚ್‌ 20ರಂದು ಮುಸ್ಲೇಪಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸುವಂತೆ ಚುನಾವಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅದಕ್ಕೆ ಯಾವುದೇ ಸ್ಪಂದನೆ ದೊರೆಯದಿರುವುದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಇಂತಹ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Advertisement

ಪ್ರತಿ ಚುನಾವಣೆಯಲ್ಲಿ ದೂರ ಕ್ರಮಿಸಿ ಮತದಾನ ಮಾಡುವುದರಿಂದ ತೊಂದರೆಯಾಗುತ್ತಿದೆ. ನಮ್ಮ ಗ್ರಾಮದಲ್ಲಿ ಹಕ್ಕು ಚಲಾಯಿಸಲು ಸ್ವತಂತ್ರ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ. ಗಡಿ ಗ್ರಾಮ ಗುರುಮಠಕಲ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಮಿನಾಸಪುರ ಮಾರ್ಗವಾಗಿ ಸಾರಿಗೆ ವ್ಯವಸ್ಥೆ ಅನುಕೂಲವಿದೆ. ಆದರೆ, ಮುಸ್ಲೇಪಲ್ಲಿಯಿಂದ ದೇವನಹಳ್ಳಿಗೆ ತೆರಳಲು ಯಾವುದೇ ಸೌಕರ್ಯವಿಲ್ಲ. ಇದರಿಂದ ತೀವ್ರ ಅನಾಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಆಮಿಷಕ್ಕೆ ಮತ ಚಲಾಯಿಸಲ್ಲ: ಮುಸ್ಲೇಪಲ್ಲಿಯಿಂದ ಮತದಾನ
ಮಾಡಲು ದೇವನಹಳ್ಳಿ ಮತಗಟ್ಟೆ ಸಂಖ್ಯೆ 159ಕ್ಕೆ ಗ್ರಾಮದಿಂದ
ನಡೆದುಕೊಂಡು ತೆರಳಬೇಕಿದೆ. ಚುನಾವಣೆ ವೇಳೆ ರಾಜಕೀಯ
ಪಕ್ಷದ ನಾಯಕರು ತಮ್ಮನ್ನು ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಹೋಗುವುದರಿಂದ ಆಮಿಷಗಳಿಗೆ ಒಳಗಾಗಿ ಅವರು ಹೇಳಿದ ವ್ಯಕ್ತಿಗೆ ಮತ ನೀಡುವ ಅನಿವಾರ್ಯತೆ ಎದುರಾಗಬಹುದು. ಹೀಗಾಗಿ ನಮ್ಮ ಹಕ್ಕಿನ ಮಹತ್ವವೇ ಇಲ್ಲದಂತಾಗಿದೆ. ಚುನಾವಣಾಧಿಕಾರಿಗಳು ಪ್ರತ್ಯೇಕ ಮತಗಟ್ಟೆ ವ್ಯವಸ್ಥೆ ಮಾಡದಿದ್ದರೆ ಮತ ಚಲಾಯಿಸಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹಕ್ಕು ಚಲಾಯಿಸಲು ಸ್ವಾತಂತ್ರ್ಯ ನೀಡಿ: ದೇಶದ ಪ್ರಜಾಪ್ರಭುತ್ವ
ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕು. ಅದನ್ನು ಚಲಾಯಿಸಲು ಇಲ್ಲಿನ ನಮ್ಮ ಹಕ್ಕಿಗೆ ಕುತ್ತು ಬಂದಿದೆ. ನಮಗೆ ಅಗತ್ಯ ಸೌಕರ್ಯ ಇಲ್ಲದ್ದರಿಂದ ನಾವು ಇಷ್ಟ ಪಡುವ ಅಭ್ಯರ್ಥಿಗೆ ಮತ ಹಾಕುವುದು ಕಷ್ಟವಾಗಬಹುದು. ನಮಗೆ ಮತದಾನ ಮಾಡಲು ಸ್ವಾತಂತ್ರ್ಯ ನೀಡಿ ಎನ್ನುತ್ತಾರೆ ಇಲ್ಲಿನ ಯುವಕರು.

ಚುನಾವಣೆಗಳಲ್ಲಿ ಮತದಾನ ಮಾಡಲು ದೂರ ತೆರಳಬೇಕು. ನಮಗೆ ವಯಸ್ಸಾಗಿದೆ. ನಡೆದುಕೊಂಡು ಹೋಗಲು
ಆಗುವುದಿಲ್ಲ. ನಮ್ಮ ಗ್ರಾಮದಲ್ಲಿಯೇ ಅನುಕೂಲ ಮಾಡಿದರೆ ಮತ
ಹಾಕುತ್ತೇವೆ. ಇಲ್ಲದಿದ್ದರೆ ಗ್ರಾಮಸ್ಥರು ಯಾರೂ ಮತ ಹಾಕುವುದಿಲ್ಲ.
ಅನಂತಮ್ಮ, ಗ್ರಾಮಸ್ಥೆ

ಸಂವಿಧಾನ ಪ್ರತಿಯೊಬ್ಬರಿಗೆ ಮತ ಚಲಾಯಿಸುವ ಹಕ್ಕು ನೀಡದೆ. ಹೆಚ್ಚಿನ ಮತದಾನವಾಗಲು ಹಲವು ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಗಡಿ ಭಾಗದಲ್ಲಿರುವ ಮುಸ್ಲೇಪಲ್ಲಿಯಲ್ಲಿ 450ಕ್ಕೂ ಹೆಚ್ಚು ಮತದಾರರು ಇದ್ದರೂ ಮತಗಟ್ಟೆ ಸ್ಥಾಪಿಸಿಲ್ಲ. ಚುನಾವಣಾಧಿಕಾರಿಗಳು ಶೀಘ್ರವೇ ಇತ್ತ ಗಮನಿಸಿ ಮತಗಟ್ಟೆ ಸ್ಥಾಪಿಸಿ ಅನುಕೂಲ ಮಾಡಬೇಕು.
ಗುರುನಾಥರೆಡ್ಡಿ ಅನಪುರ,
ವಕೀಲರು

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next