ಯಾದಗಿರಿ: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನಲ್ಲಿ ಘೋಷಣೆಯಾದ 150 ಕೋಟಿ ವೆಚ್ಚದ ಇಸ್ರೇಲ್ ಮಾದರಿ ಕೃಷಿ ಇನ್ನೂ ಅನುಷ್ಠಾನವಾಗುವ ಲಕ್ಷಣಗಳು ಕಾಣುತ್ತಿಲ್ಲ. ನಿರೀಕ್ಷೆಯಂತೆ ಯೋಜನೆ ಅನುಷ್ಠಾನವಾದರೆ ಜಿಲ್ಲೆಯ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿಯಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದಿತ್ತು. ಯೋಜನೆ ಘೋಷಣೆಯಾಗಿ ವರ್ಷ ಉರುಳಿದರೂ ಘೋಷಣೆಗೆ ಮಾತ್ರ ಸೀಮಿತ ಎನ್ನುವಂತಾಗಿದ್ದು, ಈವರೆಗೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ನಯಾ ಪೈಸೆ ಕೂಡ ಬಿಡುಗಡೆ ಮಾಡದಿರುವುರು ರೈತಾಪಿ ವಲಯದಲ್ಲಿ ತೀವ್ರ ನಿರಾಸೆ ಮೂಡಿಸಿದೆ.
2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ 440 ಕೋಟಿ ರೂ. ವೆಚ್ಚದ ಜಿಲ್ಲೆಯ ಯಾದಗಿರಿ ತಾಲೂಕು ವ್ಯಾಪ್ತಿಯ 35 ಕೆರೆಗಳ ನೀರು ತುಂಬವ ಯೋಜನೆ ಕಾಮಗಾರಿ ಜವಾಬ್ದಾರಿ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ವಹಿಸಲಾಗಿದ್ದು, ಪ್ರಸ್ತುತ ಯೋಜನೆಯಡಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಆರಂಭಿಸಲಾಗಿದೆ. ಒಟ್ಟು ಮೊದಲ ಹಂತದಲ್ಲಿ 96,850 ಮೀಟರ್ ಉದ್ದ ಹಾಗೂ ಎರಡನೇ ಹಂತದಲ್ಲಿ 26,740 ಮೀಟರ್ ಅಂತರದ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಇದರ ಕೆಳ ಭಾಗದ ಸುಮಾರು 20 ಕೆರೆಗಳಿಗೂ ನೀರು ತುಂಬಲಿದೆ. ಯೋಜನೆಗೆ ಭೀಮಾನದಿಯಿಂದ ಅಂದಾಜು 1 ಟಿಎಂಸಿ ನೀರನ್ನು ಬಳಸಿಕೊಳ್ಳುವ ಉದ್ದೇಶ ಇದ್ದು, ಇದರಿಂದ ಈ ಭಾಗದ ರೈತರಿಗೆ ನೀರಾವರಿಗೆ ಅನುಕೂಲವಾಗಲಿದೆ.
ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತನ್ನ ಆಪ್ತ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದು, ಗುರುಮಠಕಲ್ ಮತಕ್ಷೇತ್ರದ 20 ಕೆರೆಗಳಿಗೆ ನೀರು ತುಂಬುವ ಯೋಜನೆಗೆ 150 ಕೋಟಿ ರೂಪಾಯಿ ಘೋಷಿಸಿದ್ದಾರೆ. ಆದರೇ, ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ಈ ಕಾಮಗಾರಿಯೂ ನಡೆದರೆ ಗುರುಮಠಕಲ್ ಕ್ಷೇತ್ರ ಸಂಪೂರ್ಣ ನೀರಾವರಿಯಾಗಿ ರೈತರ ಬಾಳು ಬಂಗಾರವಾಗುತ್ತದೆ ಎನ್ನುವುದು ಇಲ್ಲಿನ ಜನರ ಆಶಯ.
ಅಲ್ಲದೇ ಕುಮಾರಣ್ಣ ಜಿಲ್ಲೆಗೆ 12.5 ಕೋಟಿ ರೂ. ವೆಚ್ಚದ ಕ್ರೀಡಾ ವಸತಿ ನಿಲಯವೂ ಘೋಷಿಸಿದ್ದು, ನಿರ್ಮಾಣಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಥಳವಕಾಶವಿದೆ. ಕೆಲ ತಿಂಗಳ ಹಿಂದೆಯಷ್ಟೇ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಕಾಮಗಾರಿ ಪ್ರಾರಂಭವಾಗುವುದು ಯಾವಾಗ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಜಿಲ್ಲೆಗೆ ಸಮ್ಮಿಶ್ರ ಸರ್ಕಾರದಲ್ಲಿ ಘೋಷಣೆಯಾದ ಯೋಜನೆಗಳು ಅನುಷ್ಠಾನವಾಗದೇ ಉಳಿದಿರುವುದು ಜನರಲ್ಲಿ ಬೇಸರ ಮೂಡಿಸಿದೆ.ಶೀಘ್ರ ಯೋಜನೆಗಳು ಅನುಷ್ಠಾನಗೊಂಡು ಜಿಲ್ಲೆಯ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಮೇಲಿದೆ.