Advertisement

ಸರಕು ವಾಹನಗಳಲ್ಲಿ ಜನರ ಸಾಗಾಟ ಅಪರಾಧ: ನ್ಯಾ|ತಾಳಿಕೋಟಿ

04:39 PM May 26, 2019 | Naveen |

ಯಾದಗಿರಿ: ಸರಕು ವಾಹನಗಳಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಹಾಗೂ ಇನ್ನಿತರೆ ಪ್ರಯಾಣಿಕರನ್ನು ಮೋಟಾರು ವಾಹನ ಕಾಯ್ದೆ ಮತ್ತು ನಿಯಮ ಉಲ್ಲಂಘಿಸಿ ಸುರಕ್ಷಿತವಲ್ಲದ ರೀತಿಯಲ್ಲಿ ಕರೆದುಕೊಂಡು ಹೋಗುವುದು ಅಪರಾಧ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ| ರಾಚಪ್ಪ ಕೆ.ತಾಳಿಕೋಟಿ ಹೇಳಿದರು.

Advertisement

ನಗರದ ಆರ್‌ಟಿಒ ಆವರಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಕಚೇರಿ, ಶಿಕ್ಷಣ ಇಲಾಖೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸರಕು ಸಾಗಣೆ ವಾಹನಗಳಲ್ಲಿ ಜನರು-ಮಕ್ಕಳು-ಕೂಲಿ ಕಾರ್ಮಿಕರನ್ನು ಸಾಗಿಸುವುದು ಕಾನೂನು ಬಾಹಿರ ಎಂಬುದರ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಾಗ ಪ್ರತಿದಿನ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಕೆಲಸ ನಿರ್ವಹಿಸುವಾಗ

ವೃತ್ತಿಪರವಾಗಿರಬೇಕು. ಪಾಪ-ಪುಣ್ಯ ಎಂದು ಸರಕು ವಾಹನಗಳಲ್ಲಿ ಜನರನ್ನು ಹತ್ತಿಸಿಕೊಂಡಾಗ ದುರಾದೃಷ್ಟಾವಶಾತ್‌ ಅಪಘಾತ ಸಂಭವಿಸಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಪಘಾತಕ್ಕೀಡಾದವರಿಗೆ ಇನ್ಸೂರೆನ್ಸ್‌ ಕೂಡ ಅನ್ವಯವಾಗುವುದಿಲ್ಲ. ಮಾಲೀಕ ಪರಿಹಾರ ನೀಡಲು ಶಕ್ತನಾಗಿರದಿದ್ದಲ್ಲಿ ಜೈಲು ಸೇರುತ್ತಾನೆ. ಆದರೆ, ಅಪಘಾತಕ್ಕೀಡಾದ ವ್ಯಕ್ತಿಯ ಕುಟುಂಬದವರು ಬೀದಿ ಪಾಲಾಗಬೇಕಾಗುತ್ತದೆ ಎಂದು ಹೇಳಿದರು.

ವಾಹನ ಚಾಲಕ 10-20 ರೂ.ಗಳ ಆಸೆಗಾಗಿ ಸುಮಾರು 8 ಲಕ್ಷ ರೂ.ಗಳ ವರೆಗೆ ದಂಡ ತೆರುವ ಸಂಭವ ಎದುರಾಗಬಹುದು. ವಾಹನ ಮಾಲೀಕನ ಜತೆಗೆ ಚಾಲನಕನೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಚಾರ ಪೊಲೀಸರು ಇಲ್ಲ ಎಂದು ಏಕಮುಖ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಬಾರದು. ಪೊಲೀಸರಿಗೆ ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಪಾಲಿಸಿ ಎಂದು ಹೇಳುವ ಕೆಲಸ ಮಾತ್ರವೇ ಇರುವುದಿಲ್ಲ. ಪ್ರಮುಖ ಪ್ರಕರಣಗಳ ತನಿಖೆ ಸೇರಿದಂತೆ ಹಲವು ಕಾರ್ಯಗಳಿರುತ್ತವೆ. ಕಾನೂನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಾರ್ವಜನಿಕರು ಸಂಚಾರ ನಿಯಮ ಪಾಲನೆ ಬಗ್ಗೆ ಸ್ವಯಂ ಬದಲಾವಣೆ ತಂದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

Advertisement

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ಪ್ರತಿದಿನ ವಾಹನಗಳ ಸಂಚಾರದಿಂದ ಹೆಚ್ಚು ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಅಗತ್ಯವಾಗಿದೆ. ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಯಾರೂ ಉಲ್ಲಂಘಿಸಬಾರದು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ತಂಡದಿಂದ ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಜಿಲ್ಲೆಯಲ್ಲಿ 65 ಅಪಘಾತ ವಲಯ (ಬ್ಲ್ಯಾಕ್‌ಸ್ಪಾಟ್) ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಸೂಚನಾ ಫಲಕ ಅಳವಡಿಕೆ, ರಸ್ತೆ ಸುಧಾರಣೆ ಸೇರಿದಂತೆ ಮುಂತಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ಚಾಲಕರು ಸುರಕ್ಷಿತವಾಗಿ ವಾಹನ ಚಲಾಯಿಸುವುದು ಅವಶ್ಯವಾಗಿದೆ ಎಂದು ಹೇಳಿದರು.

ಅಧಿಕ ಭಾರ ಅಥವಾ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯಬಾರದು. ರಸ್ತೆ ಬದಿ ಸೂಚನಾ ಫಲಕಗಳನ್ನು ಗಮನಿಸಿ ವಾಹನ ಚಲಾಯಿಸಬೇಕು. ಮದ್ಯಪಾನ ಮಾಡಿ ಅಥವಾ ಮೊಬೈಲ್ ಬಳಕೆ ಮಾಡುತ್ತ ವಾಹನ ಚಲಾಯಿಸಬಾರದು. ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಎಫ್‌ಐಆರ್‌ ದಾಖಲಿಸಲಾಗುತ್ತಿದೆ. ಆರ್‌ಸಿ ಪರವಾನಗಿ ಮತ್ತು ಚಾಲನಾ ಪರವಾನಗಿ ರದ್ಧತಿಗೂ ಕೂಡ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಡಿವೈಎಸ್‌ಪಿ ಯು. ಶರಣಪ್ಪ, ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರ್‌ಸಿಂಗ್‌ ಠಾಕೂರ್‌ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ವಕೀಲ ಬಿ.ಜಿ. ಪಾಟೀಲ ಉಪನ್ಯಾಸ ನೀಡಿದರು.

ಸಾರಿಗೆ ಸಂಸ್ಥೆ ವಿಭಾಗೀಯ ಸಂಚಾಲನಾ ಅಧಿಕಾರಿ ಮಹಿಪಾಲ ಬೇಗಾರ, ಕಾರ್ಮಿಕ ಇಲಾಖೆ ಯಾದಗಿರಿ ವೃತ್ತ ನಿರೀಕ್ಷಕ ಶಿವಶಂಕರ ಬಿ. ತಳವಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ

ಶ್ರೀನಿವಾಸರಾವ್‌ ಕುಲಕರ್ಣಿ, ಪ್ರಾದೇಶಿಕ ಸಾರಿಗೆ ಇಲಾಖೆ ಇನ್‌ಸ್ಪೆಕ್ಟರ್‌ ವೆಂಕಟಪ್ಪ, ಗಿರಿನಾಡು ಟ್ಯಾಕ್ಸಿ ಕಾರ್‌ ಚಾಲಕರ ಸಂಘದ ಅಧ್ಯಕ್ಷ ಮಲ್ಲನಗೌಡ, ಶಂಕರನಾಗ ಅಭಿಮಾನಿಗಳ ಹಾಗೂ ಆಟೊ ಚಾಲಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಸರ್‌ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದೇವಜಿ ಜಾಧವ, ಜಿಲ್ಲಾ ಮೆಕ್ಯಾನಿಕ್‌ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಚವ್ಹಾಣ, ಇಮ್ರಾನ್‌ ಖಾಜಿ ಇದ್ದರು. ಕಾರ್ಯಕ್ರಮದಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ, ವಾಹನ ಚಾಲಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next