ಯಾದಗಿರಿ: ಸಂತ ಶ್ರೇಷ್ಠ ಭಕ್ತ ಕನಕದಾಸರು ತಮ್ಮ ಅಪಾರ ಜ್ಞಾನ ಮತ್ತು ಭಕ್ತಿ ಮಾರ್ಗದಿಂದ ದೇವರನ್ನು ಕಂಡರು. ಸಮಾಜದ ಏಳ್ಗೆಗಾಗಿ ಕೀರ್ತನೆ ಬರೆದ ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಿವೆ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ನಮ್ಮ ನಾಡಿನ ಪುಣ್ಯಪುರುಷರು. ಅವರ ಭಕ್ತಿ ಬಗ್ಗೆ ಎಷ್ಟು ಬಣ್ಣಿಸಿದರೂ ಸಾಲದು. ಭಕ್ತಿಯಿಂದಲೇ ಶ್ರೀಕೃಷ್ಣನ ದರ್ಶನ ಪಡೆದರು. ಸಮಾಜದ ನೂನ್ಯತೆಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಿದರು. ಹಾಲುಮತ ಸಮಾಜ ಹಿಂದೂ ಧರ್ಮದಲ್ಲಿಯೇ ಅತಿ ಸೂಕ್ಷ್ಮ ಮತ್ತು ಮುಗ್ದ ವಾಗಿದೆ. ಮತ್ತೂಬ್ಬರ ಹಿತ ಬಯಸುವ ಇವರು ಕಾಯಕ ನಂಬಿ ಜೀವನ ನಡೆಸುತ್ತಾರೆ.
ಸಮಾಜದ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು. ಪ್ರಭಾರಿ ಅಪರ ಜಿಲ್ಲಾಧಿ ಕಾರಿ ಶಂಕರಗೌಡ ಎಸ್. ಸೋಮನಾಳ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ನೀಡಿದ ಕನಕದಾಸರ ಜಯಂತ್ಯೋತ್ಸವ ಸಂದೇಶ ಓದಿದರು.
ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಸಮಾಜದ ಮುಖಂಡರಾದ ಸಿದ್ದನಗೌಡ ಕಾಡಂನೋರ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಮತ್ತು ಕಲಾತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿದರು