ಯಾದಗಿರಿ: ಜಿಲ್ಲೆಯ ಕವಡಿಮಟ್ಟಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಪ್ರಧಾನಮಂತ್ರಿಗಳ ಜನ್ಮದಿನದ ಅಂಗವಾಗಿ ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಕಾಳಜಿಯನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಇಫ್ಕೂೕ ರಸಗೊಬ್ಬರಗಳ ಸಂಸ್ಥೆಯೊಂದಿಗೆ ಸಾವಿರ ಗಿಡಗಳನ್ನು ನೆಡುವ ಬೃಹತ್ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಮಲ್ಲಿಕಾರ್ಜುನ ಕೆಂಗನಾಳ, ಹೆಚ್ಚುತ್ತಿರುವ ಬರಗಾಲ ತಡೆಯಲು ಮತ್ತು ಸಕಾಲದಲ್ಲಿ ಮಳೆಯಾಗಲು ಅರಣ್ಯ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಈಗಿರುವ ಗಿಡಗಳನ್ನು ಕಡಿಯುವುದನ್ನು ಕೂಡಲೇ ಬಿಡಬೇಕು. ಪ್ರತಿಯೊಬ್ಬ ರೈತರು ಸಸಿ ನೆಡುವ ಕೆಲಸ ಮಾಡಬೇಕು. ಗಿಡ ಮರಗಳ ರಕ್ಷಣೆ ಮಾಡಬೇಕು. ಅರಣ್ಯ ರಕ್ಷಣೆಗೆ ಮುಂದಾಗಬೇಕು. ವಿನಃ ಕಡಿದು ಹಾಳು ಮಾಡಬಾರದು. ಅಲ್ಲದೆ ಪ್ರತಿ ಎಕರೆ ಭೂಮಿಗೆ ಕನಿಷ್ಠ 10 ಗಿಡ ನೆಡುವ ಪಣ ತೊಡಬೇಕು ಎಂದು ಸಲಹೆ ನೀಡಿದರು.
ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ಮೋಹನ ಚವ್ಹಾಣ ಮಾತನಾಡಿ, ಗಿಡಗಳನ್ನು ನೆಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಾವು ಉಸಿರಾಡುವ ಗಾಳಿ ಶುದ್ಧವಾಗಿರಬೇಕು ಎಂದರೆ ಮರಗಳು ಅಗತ್ಯ. ಈಗಾಗಲೇ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಉಸಿರಾಡಲು ಶುದ್ಧ ಗಾಳಿಯೂ ದೊರೆಯದಿದ್ದರೆ ಜೀವಸಂಕುಲಗಳ ಬದುಕು ವಿನಾಶದಡೆಗೆ ಸಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು ಆದಷ್ಟು ಮಟ್ಟಿಗೆ ತಮಗೆ ಅವಶ್ಯಕ ಬೆಳೆಗಳನ್ನು ಬೆಳೆಯದೇ, ಇತರೆ ಪ್ರಾಣಿ- ಪಕ್ಷಿಗಳಿಗೆ ಸಹಾಯಕವಾಗುವ ಮತ್ತು ಮುಂದಿನ ಪೀಳಿಗೆಗೆ ಕೊಡಬಹುದಾದ ಗಿಡಗಳನ್ನು ಬೆಳೆಸಬೇಕು. ಅಮೂಲ್ಯ ಸಂಪತ್ತಾದ ಕಾಡನ್ನು ಎಲ್ಲರೂ ಸಂರಕ್ಷಿಸೋಣ ಎಂದು ಸಲಹೆ ನೀಡಿದರು.
ರೈತರಿಗೆ ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ತಯಾರಿ, ಬೀಜೋಪಚಾರ, ಸಸ್ಯ ಸಂರಕ್ಷಣೆ ಮುಂಜಾಗ್ರತೆಗಳ ಮಾಹಿತಿ ಮತ್ತು ಪ್ರಸಕ್ತ ಹತ್ತಿ, ತೊಗರಿ ಹಾಗೂ ಭತ್ತ ಬೆಳೆಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ಮಂಜಲಾಪುರ, ಕವಡಿಮಟ್ಟಿ, ಗುಡಿಹಾಳ ಮತ್ತು ಚಂದಲಾಪುರ ರೈತರು ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಶೋಧನಾ ಕೇಂದ್ರದ ಡಾ| ಮಹೇಶ, ಶ್ರೀದೇವಿ, ಸುಮಂಗಲಾ, ಮಾಳಗಿ, ಮಲ್ಲಿಕಾರ್ಜುನ ಸ್ವಾಮಿ, ಶಶಿಧರ ರೆಡ್ಡಿ, ಸುರೇಶ ಮತ್ತು ಇತರೆ ಕಾರ್ಮಿಕರು ಇದ್ದರು.