Advertisement

ಹಿಂದುಳಿದ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ನೀಡಿ ಉತ್ತೇಜನ

11:05 AM Jun 16, 2019 | Naveen |

ಅನೀಲ ಬಸೂದೆ
ಯಾದಗಿರಿ:
ಗಡಿ ಜಿಲ್ಲೆಯ ಗುರುಮಠಕಲ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಜಮೀನು ಸ್ವಾಧೀನಮಾಡಿಕೊಂಡು 10 ವರ್ಷಗಳು ಕಳೆದರೂ ಈವರೆಗೆ ಒಂದು ಕಾರ್ಖಾನೆಯೂ ತಲೆ ಎತ್ತಿಲ್ಲ.

Advertisement

ಗುರುಮಠಕಲ್ನ ಕಡೇಚೂರು- ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ ರೈತರಿಂದ 3332 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಭಾಗದ ನಿರುದ್ಯೋಗಿಗಳ ಬಹುವರ್ಷಗಳ ಬೇಡಿಕೆ ಈಡೇರಿಸಲು ಜಮೀನು ಗುರುತಿಸಲಾಗಿದೆ. ಇದರಿಂದಾಗಿ ಈ ಭಾಗಕ್ಕೆ ಹಲವು ಕೈಗಾರಿಕೆಗಳನ್ನು ತಂದು ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಿಸುತ್ತದೆ ಎನ್ನುವ ಜನರ ನಿರೀಕ್ಷೆ ಈಡೇರುವ ಲಕ್ಷಣಗಳು ಇನ್ನೂ ಕಾಣುತ್ತಿಲ್ಲ.

ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಉದ್ಯೋಗವಿಲ್ಲದೇ ನಿರುದ್ಯೋಗಿ ಯುವಕರು ಬೆಂಗಳೂರು, ಮುಂಬೈ ಹಾಗೂ ಹೈದರಾಬಾದನಂತಹ ಮಹಾನಗರಗಳಿಗೆ ತೆರಳಿ ದುಡಿಯುವಂತಾಗಿದೆ. ಸ್ಥಳೀಯವಾಗಿಯೇ ಉದ್ಯೋಗಗಳು ಲಭ್ಯವಾದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನ.

ಕೆಲ ವರ್ಷಗಳ ಹಿಂದೆಯಷ್ಟೇ ರೈಲ್ವೆ ಫಿಯೇಟ್ ಬೋಗಿ ತಯಾರಿಕಾ ಕೈಗಾರಿಕೆ ಆರಂಭವಾಗಿದ್ದು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಾಬುರಾವ ಚಿಂಚನಸೂರ ಗುರುಮಠಕಲ್ ಕ್ಷೇತ್ರದಲ್ಲಿ ಕೈಗಾರಿಕೆ ಕ್ರಾಂತಿ ಮಾಡುತ್ತೇವೆ ಎಂದು ಭಾಷಣಗಳಲ್ಲಿಯೇ ಹೇಳಿ ಜನರನ್ನು ಮರಳು ಮಾಡಿದ್ದರು ಎನ್ನುವ ಬೇಸರ ಇಲ್ಲಿನ ಜನರಲ್ಲಿದೆ.

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅಧಿಕಾರದಲ್ಲಿದ್ದು, ಶಾಸಕರೂ ಕೂಡ ಸ್ಥಳೀಯರಾಗಿದ್ದಾರೆ. ಹಾಗಾಗಿ ಮತ್ತೆ ಸ್ಥಳೀಯರಲ್ಲಿ ಕೈಗಾರಿಕೆಗಳ ಸ್ಥಾಪನೆ ಕನಸು ಚಿಗುರೊಡೆದಿದೆ. ಮುಖ್ಯಮಂತ್ರಿಗಳ ಆಪ್ತರಾಗಿರುವ ಶಾಸಕ ನಾಗನಗೌಡ ಕಂದಕೂರ ಅವರು ಪ್ರಯತ್ನಪಟ್ಟು ಈ ಭಾಗದಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಒತ್ತು ನೀಡಲಿ ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

Advertisement

ಹಿಂದುಳಿದ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಹೈದ್ರಾಬಾದ್‌ ಕರ್ನಾಟಕದ‌ ಗುರುಮಠಕಲ್ ತಾಲೂಕಿನಿಂದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಆರಂಭಿಸುತ್ತಿದ್ದು, ಈ ಭಾಗದ ನಿರುದ್ಯೋಗಿ ಯುವಕರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿ ಕೈಗಾರಿಕೆ ಸ್ಥಾಪನೆಗೆ ಉತ್ತೇಜನೆ ನೀಡುವ ಕಾರ್ಯ ಮಾಡುವ ಕಾಳಜಿ ತೋರಲಿ ಎನ್ನುವುದು ಸ್ಥಳೀಯರ ಒತ್ತಾಯ. ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಈವರೆಗೆ ಕೇವಲ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಆದರೆ ಅಗತ್ಯವಾದ ವಿದ್ಯುತ್‌ ಹಾಗೂ ನೀರಿನ ವ್ಯವಸ್ಥೆ ಇಲ್ಲ. ಇನ್ನಿತರ ಮೂಲಸೌಕರ್ಯಗಳು ಇಲ್ಲದಿರುವುದರಿಂದ ಕೈಗಾರಿಗಳು ಸ್ಥಾಪನೆಯಾಗುತ್ತಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಸೌಕರ್ಯ ಕಲ್ಪಿಸುವುದಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next