ಯಾದಗಿರಿ: ಸರ್ವ ಪಾಪ ಪರಿಹಾರಕ್ಕೆ ಜಯತೀರ್ಥರ ಸ್ಮರಣೆಯಿಂದ ಮುಕ್ತಿ ದೊರೆಯಲು ಸಾಧ್ಯವೆಂದು ಉತ್ತರಾದಿ ಮಠದ ಪೂಜ್ಯ ಸತ್ಯಾತ್ಮ ತೀರ್ಥರು ಹೇಳಿದರು.
ಯರಗೋಳದಲ್ಲಿ ಜಯತೀರ್ಥರ ಪೂರ್ವ ಆರಾಧನ ಮಹೋತ್ಸವ ನಿಮಿತ್ತ ಸಂಸ್ಥಾನ ಮೂಲ ರಾಮ ದೇವರ ಪೂಜೆ ನೆರವೇರಿಸಿ ಭಕ್ತರಿಗೆ ಅವರು ಆಶೀರ್ವಚನ ನೀಡಿದರು.
ಭಗವಂತ ಅತ್ಯಮೂಲ್ಯವಾದ ಶರೀರ ನೀಡಿದ್ದಾನೆ. ಆದರೂ ದೇವರು ನಮಗೇನು ಕೊಟ್ಟಿದ್ದಾನೆ ಎಂಬ ಪ್ರಶ್ನೆ ನಮ್ಮಲ್ಲಿ ಸದಾ ಕಾಡುತ್ತಿದೆ. ನಮ್ಮ ದೇಹದಲ್ಲಿರುವ ಕೋಟ್ಯಂತರ ಬೆಲೆ ಕಟ್ಟಲಾಗದ ಹೃದಯ, ಕಿಡ್ನಿ ನೀಡಿರುವ ಆ ಭಗವಂತನ ತಿಳಿಯಲು ಪ್ರಯತ್ನಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ಆಚಾರ್ಯರ ಅನೇಕ ಗ್ರಂಥಗಳಿಗೆ ವ್ಯಾಖ್ಯಾನ ಬರೆದ ಜಯತೀರ್ಥರು ಯರಗೋಳ ಗುಹೆಯಲ್ಲಿ ಅನೇಕ ವರ್ಷ ತಪಸ್ಸು ಮಾಡಿ, ಅನೇಕ ಗ್ರಂಥಗಳಿಗೆ ಟೀಕೆಯನ್ನು ಬರೆದಿದ್ದರಿಂದ ಅವರಿಗೆ ಟೀಕಚಾರ್ಯರು ಎಂದು ಸಹ ಕರೆಯಲಾಗುತ್ತಿದೆ ಎಂದರು.
ಬೆಳಗ್ಗೆ ಭಕ್ತರಿಂದ ಸಾಮೂಹಿಕ ಪಾದಪೂಜೆ, ತಪ್ತಮುದ್ರಾಧಾರಣೆ ಹಾಗೂ ಸಂಸ್ಥಾನ ಪೂಜೆ ತೀರ್ಥ ಪ್ರಸಾದ ನೆರವೇರಿತು.
ಸಮಾರಂಧಲ್ಲಿ ರಾಜ್ಯ ಸೇರಿದಂತೆ, ಮಹಾರಾಷ್ಟ್ರ, ತೆಲಂಗಾಣದಿಂದ ಅಪಾರ ಭಕ್ತ ಸಮೂಹ ಪಾಲ್ಗೊಂಡಿದ್ದರು. ಪಂ. ವಿದ್ಯಾನರಸಿಂಹಾಚಾರ್ಯ ಮಹೂಲಿ, ಪಂ. ನರಸಿಂಹಾಚರ್ಯ ಪುರಾಣಿಕ, ಪಂ. ಸತ್ಯಬೋಧಾಚಾರ್ಯ, ಪಂ. ರಾಘವೇಂದ್ರಾಚಾರ್ಯ ಬಳಿಚಕ್ರ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಘವೇಂದ್ರರಾವ್ ಮುಂಡರಗಿ, ಗುರುರಾಜ ಕುಲಕರ್ಣಿ, ಗುಂಡೇರಾವ್ ಪಂಚಾಹತ್ರಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.