ಯಾದಗಿರಿ: ಜಿಲ್ಲಾದ್ಯಂತ ಸೆ. 25ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಯಶಸ್ವಿಯಾಗಲು ಜಂತುಹುಳು ನಾಶಕ ಅಲ್ಬೆಂಡ್‌ಜೋಲ್ ಮಾತ್ರೆಗಳ ಪ್ರಯೋಜನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ಅಂಗವಾಗಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿನಾಚರಣೆಯಲ್ಲಿ ಜಿಲ್ಲೆಯ 1ರಿಂದ 19 ವರ್ಷದೊಳಗಿನ ಒಟ್ಟು 3,41,359 ಮಕ್ಕಳಿಗೆ ಅಲ್ಬೆಂಡ್‌ಜೋಲ್ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ. ಸೆ.25ರಂದು ಸರ್ಕಾರಿ, ಖಾಸಗಿ ಶಾಲಾ-ಕಾಲೇಜು, ಅಂಗನವಾಡಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಅಲ್ಬೆಂಡ್‌ಜೋಲ್ ಮಾತ್ರೆ ನೀಡಬೇಕು. ಅಲ್ಲದೆ, ಪ್ರಾಥಮಿಕ ಹಾಗೂ ಉಪ ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆ ವಿತರಿಸುವ ಮೂಲಕ ಪ್ರತಿಶತ ಸಾಧನೆ ಮಾಡಬೇಕು. ಅಂದು ಮಾತ್ರೆ ಪಡೆಯದೇ ಬಾಕಿ ಇರುವ ಮಕ್ಕಳಿಗೆ ಸೆೆ. 30ರ ಮಾಪ್-ಆಪ್ ದಿನದಂದು ಕಡ್ಡಾಯವಾಗಿ ವಿತರಿಸುವಂತೆ ನಿರ್ದೇಶಿಸಿದರು.
ಕಳೆದ ಬಾರಿ ಖಾಸಗಿ ಶಾಲೆಗಳಲ್ಲಿ ಹೊಂದಿದ ಗುರಿ ಸಾಧನೆಯಲ್ಲಿ ಹಿನ್ನಡೆಯಾಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಅಲ್ಬೆಂಡ್‌ಜೋಲ್ ಮಾತ್ರೆ ಚೀಪುವುದರಿಂದ ಮಕ್ಕಳಲ್ಲಿ ರಕ್ತ ಹೀನತೆ ನಿಯಂತ್ರಣ ಮತ್ತು ಪೋಷಕಾಂಶ ಹೀರಿಕೆ ಸುಧಾರಿಸುತ್ತದೆ. ಆದ್ದರಿಂದ ಖಾಸಗಿ ಶಾಲೆ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಿಗೆ ಡಿಡಿಪಿಐ ಹಾಗೂ ಡಿಡಿಪಿಯು ಅವರಿಂದ ಇ-ಮೇಲ್ ಮೂಲಕ ಮಾಹಿತಿ ನೀಡಬೇಕು. ಜತೆಗೆ ಸರ್ಕೂಲರ್, ವಾಟ್ಸ್‌ಆ್ಯಪ್, ಟೆಕ್ಸ್ಟ್ ಸಂದೇಶ, ಪೋನ್ ಕರೆ ಮೂಲಕ ಸಂವಹನ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯ ನಗರಸಭೆ ಹಾಗೂ ಪುರಸಭೆಗಳ ಕಸ ವಿಲೇವಾರಿ ವಾಹನಗಳ ಮೂಲಕ ದಿನಾಚರಣೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ಅದರಂತೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸೆ.24ರಂದು ಬೆಳಗ್ಗೆ ಮತ್ತು ಸಂಜೆ ಹಾಗೂ ಸೆ. 25ರಂದು ಬೆಳಗ್ಗೆ ಡಂಗೂರ ಸಾರಬೇಕು. ಕಾರ್ಯಕ್ರಮದ ಯಶಸ್ವಿ ಕೇವಲ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಳ್ಳುವುದರಿಂದ ಯಶಸ್ವಿಯಾಗುತ್ತದೆ. ಹಾಗಾಗಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ವಾರ್ಡ್‌ಗಳಲ್ಲಿ ಸಣ್ಣ-ಸಣ್ಣ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಗುರಿ ಹೊಂದಿದ ಎಲ್ಲ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆ ತಲುಪಲು ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಭಗವಂತ ಅನವಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ನಾರಾಯಣಪ್ಪ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ರಾದೇಶಿಕ ಕನ್‌ಸ್ಟಂಟ್ ಡಾ| ಅಲಿಬಾಬಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಇ-ಆಸ್ಪತ್ರೆ ಪ್ರೋಗ್ರಾಮರ್ ಸಾಯಬಗೌಡ, ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಪ್ರಭು ಬೀಳಗಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಆರೋಗ್ಯಾಧಿ ಕಾರಿಗಳು ಸಭೆಯಲ್ಲಿ ಹಾಜರಿದ್ದರು.