Advertisement

ಸ್ವಾತಂತ್ರ್ಯೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

11:19 AM Jul 31, 2019 | Naveen |

ಯಾದಗಿರಿ: ನೂತನ ತಾಲೂಕುಗಳಾದ ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ಸೇರಿದಂತೆ ಜಿಲ್ಲೆಯ ಎಲ್ಲಾ ಆರು ತಾಲೂಕುಗಳಲ್ಲಿ ಆಗಸ್ಟ್‌ 15ರಂದು 73ನೇ ಸ್ವಾತಂತ್ರ್ಯೋತ್ಸವ ದಿನ ಅದ್ಧೂರಿಯಾಗಿ ಆಚರಿಸಬೇಕು ಎಂದು ಡಿಸಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ. 15ರಂದು ಬೆಳಗ್ಗೆ 7ರಿಂದ 8:00 ಗಂಟೆವರೆಗೆ ತಮ್ಮ-ತಮ್ಮ ಕಚೇರಿಗಳಲ್ಲಿ ಮತ್ತು ಶಾಲಾ- ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ನಂತರ 8:30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಹಾಜರಾಗಬೇಕು. ಇದಕ್ಕೂ ಮುನ್ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅಂದು ಬೆಳಗ್ಗೆ 8:00 ಗಂಟೆಗೆ ಜಿಲ್ಲಾಡಳಿತ ಸಂಕೀರ್ಣಕ್ಕೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ನಂತರ ಜಿಲ್ಲಾ ಕ್ರೀಡಾಂಗಣದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ನಿರ್ದೇಶಿಸಿದರು.

ನಾಡ ಗೀತೆ, ರಾಷ್ಟ್ರಗೀತೆಗಳನ್ನು ಹಾಡಲು ನುರಿತ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು. ಅಂದು ಬೆಳಗ್ಗೆ 9:00 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಶಾಲಾ- ಕಾಲೇಜು ಮಕ್ಕಳಿಂದ ಭಾವೈಕ್ಯತೆಯಿಂದ ಕೂಡಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ನೀಡಲು ನಿರ್ಧರಿಸಲಾಯಿತು. ಸಂಜೆ 5ರಿಂದ 8:00 ಗಂಟೆವರೆಗೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ತಿಳಿಸಿದರು.

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌: ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಅವರಿಗೆ ಸೂಚಿಸಿದರು. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಬಂದಿದ್ದು, ಕಾರ್ಯಕ್ರಮದಲ್ಲಿ ಸನ್ಮಾನದ ಜೊತೆಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಗುವುದು ಎಂದು ಶ್ರೀಶೈಲ ಬಿರಾದಾರ ತಿಳಿಸಿದರು.

Advertisement

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬದವರನ್ನು ಸನ್ಮಾನಿಸಲಾಗುವುದು. ಆದ್ದರಿಂದ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಈ ಹಿಂದೆ ಸನ್ಮಾನ ಮಾಡಲಾದ ವ್ಯಕ್ತಿಗಳನ್ನು ಹೊರತು ಪಡಿಸಿ, ತಮ್ಮ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬದ ವ್ಯಕ್ತಿಗಳಿದ್ದಲ್ಲಿ ವರದಿ ನೀಡುವ ಜೊತೆಗೆ ಕಾರ್ಯಕ್ರಮಕ್ಕೆ ಕರೆ ತರುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಪೊಲೀಸ್‌ ಇಲಾಖೆಯಿಂದ-2, ಅರಣ್ಯ ಇಲಾಖೆ-1, ಅಬಕಾರಿ ಇಲಾಖೆ-1, ಅಗ್ನಿಶಾಮಕ ಇಲಾಖೆ-1, ಭಾರತ ಸೇವಾದಳ-2, ಗೃಹರಕ್ಷಕ ದಳ-1, ಎನ್‌ಸಿಸಿ-1, ಸ್ಕೌಟ್ಸ್‌ ಅಂಡ್‌ ಗೈಡ್ಸ್‌-4, ಶಾಲಾ ತಂಡ-1, ಕಾಲೇಜು-2 ತಂಡಗಳು ಸಾಮೂಹಿಕ ಕವಾಯಿತುನಲ್ಲಿ ಭಾಗವಹಿಸಲು ತೀರ್ಮಾನ ಕೈಗೊಳ್ಳಲಾಯಿತು. ಇವುಗಳ ಜೊತೆಗೆ ಒಂದು ವಸತಿ ಶಾಲೆಯ ಮಕ್ಕಳು ಕವಾಯಿತುನಲ್ಲಿ ಪಾಲ್ಗೊಳ್ಳಬೇಕು. ಸ್ವಾತಂತ್ರ್ಯ ದಿನಾಚರಣೆ ದಿನದಂದು ಕವಾಯತ್‌ನಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಮೂರು ದಿನಗಳ ತರಬೇತಿ ಅವಯಲ್ಲಿ ಬಾಳೆಹಣ್ಣು, ಹಾಲು ಮತ್ತು ಕುಡಿಯುವ ನೀರು ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಮಳೆಗಾಲ ಇರುವುದರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನೀರು ನಿಲ್ಲದಂತೆ ಮೈದಾನವನ್ನು ಸಮತಟ್ಟುಗೊಳಿಸಬೇಕು. ಶಿಷ್ಟಾಚಾರದ ಪ್ರಕಾರ ವೇದಿಕೆಯ ಮೇಲೆ ಗಣ್ಯರಿಗೆ ಆಸನ ವ್ಯವಸ್ಥೆ ಮಾಡಬೇಕು. ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ ವ್ಯಕ್ತಿಗಳು ವೇದಿಕೆಯ ಮೇಲೆ ಕೂಡಿಸುವ ಹಾಗಿಲ್ಲ. ಹಾಗಾಗಿ ಗಣ್ಯ ವ್ಯಕ್ತಿಗಳು ಬಂದಲ್ಲಿ ಅವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು. ಇನ್ನು ವೇದಿಕೆಗೆ ಟೆಂಟ್, ಮೈಕ್‌, ದೀಪಾಲಂಕಾರ, ಜನರೇಟರ್‌ ವ್ಯವಸ್ಥೆ ಮಾಡಬೇಕು ಹಾಗೂ ಎಲ್ಲಾ ಸರಕಾರಿ ಕಚೇರಿ, ಜಿಲ್ಲಾಡಳಿತ ಕಾರ್ಯಾಲಯ, ನಗರದ ವೃತ್ತಗಳಲ್ಲಿ ವಿದ್ಯುತ್‌ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಅಂದು ಬೆಳಗ್ಗೆ 5ರಿಂದ ರಾತ್ರಿ 9:00 ಗಂಟೆಯವರೆಗೆ ಲೋಡ್‌ ಶೆಡ್ಡಿಂಗ್‌ ಆಗದಂತೆ ಜೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳಗಿನ ಕಾರ್ಯಕ್ರಮ ಮತ್ತು ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಹಾಗೂ ಸಾರಿಗೆ ಇಲಾಖೆಯು ಬಸ್‌ ವ್ಯವಸ್ಥೆ ಮಾಡಲು ನಿರ್ದೇಶಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನವಣೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಜಿಲ್ಲಾ ಭಾವೈಕ್ಯತಾ ಸಮಿತಿ ಅಧ್ಯಕ್ಷ ಬಾಬು ದೋಖಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next