ಯಾದಗಿರಿ: ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ ವತಿಯಿಂದ ತೋಟಗಾರಿಕೆ ಪಿತಾಮಹ ಡಾ| ಎಂ.ಎಚ್. ಮರಿಗೌಡ ಅವರ ಜನ್ಮದಿನದ ಅಂಗವಾಗಿ ತೋಟಗಾರಿಕೆ ದಿನಾಚರಣೆ ಪ್ರಯುಕ್ತ ನಗರದ ಹೊಸ ಬಸ್ ನಿಲ್ದಾಣ ಆವರಣದಲ್ಲಿ ಮೂರು ದಿನಗಳ ವರೆಗೆ ಆಯೋಜಿಸಿರುವ ಸಸ್ಯ ಸಂತೆಗೆ ಶಾಸಕ ನಾಗನಗೌಡ ಕಂದಕೂರ ಚಾಲನೆ ನೀಡಿದರು.
ನಂತರ ಸಸ್ಯ ಸಂತೆಯಲ್ಲಿ ಜಿಲ್ಲೆ ತೋಟಗಾರಿಕೆ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿ ಉತ್ಪಾದಿಸಿದ ಕಸಿ-ಸಸಿಗಳು ಹಾಗೂ ಇಲಾಖೆಯ ಇತರೆ ಜೈವಿಕ ಪರಿಕರಗಳ ಪ್ರದರ್ಶನ ಮತ್ತು ಕಸಿ ಸಸಿಗಳ ಮಾರಾಟ ವೀಕ್ಷಿಸಿದ ಶಾಸಕರು, ನಿಗದಿಪಡಿಸಿದ ರಿಯಾಯಿತಿ ದರದಲ್ಲಿ ಗುಣಮಟ್ಟದ ಸಸಿಗಳನ್ನು ಮಾತ್ರ ಮಾರಾಟ ಮಾಡಬೇಕು. ಪ್ರಸ್ತುತ ತರಕಾರಿಗಳ ಬೆಲೆ ಗಗನಕ್ಕೇರಿದೆ. ರೈತರು ಕೇವಲ 10 ಗುಂಟೆಯಲ್ಲಿ ತರಕಾರಿ ಬೆಳೆದರೆ ಸುಖ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಮಾಹಿತಿ ಜತೆಗೆ ಮಾರ್ಗದರ್ಶನ ನೀಡುವುದು ಅವಶ್ಯಕ. ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತಂತೆ ರೈತರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗುಣಮಟ್ಟದ ಯೋಗ್ಯ ತಳಿಗಳ ಕಸಿ ಸಸಿಗಳನ್ನು ಕಡಿಮೆ ದರದಲ್ಲಿ ರೈತರಿಗೆ ಮಾರಾಟ ಮಾಡುವುದು ಹಾಗೂ ಜಾಗೃತಿ ಮೂಡಿಸುವುದು ಸಸ್ಯ ಸಂತೆ ಮೂಲ ಉದ್ದೇಶವಾಗಿದೆ. ರೈತರು, ಸಾರ್ವಜನಿಕರು, ಪ್ರಯಾಣಿಕರು ಸಸ್ಯ ಸಂತೆ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಮಾತನಾಡಿ, ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಾದ ಯಾದಗಿರಿ ತಾಲೂಕಿನ ಹ್ತತಿಕುಣಿ, ಹುಣಸಗಿ ತಾಲೂಕಿನ ನಾರಾಯಣಪುರ ಹಾಗೂ ಯಾದಗಿರಿ ಜಿಲ್ಲಾ ನರ್ಸರಿ ಮತ್ತು ಸುರಪುರ ನರ್ಸರಿಯಲ್ಲಿ ಗುಣಮಟ್ಟದ ವಿವಿಧ ಕಸಿ ಸಸಿಗಳು ಲಭ್ಯವಿರುತ್ತವೆ. ಅಲ್ಲದೆ, ರೈತರಿಗೆ ಬೇಕಾದ ತಳಿಯ ತರಕಾರಿ ಸಸಿಗಳನ್ನು ತಯಾರಿಸಿಕೊಡಲು ಒಂದು ತಿಂಗಳು ಮುಂಚಿತವಾಗಿ ಸಂಬಂಧಿಸಿದ ಕ್ಷೇತ್ರಗಳಿಗೆ ತಿಳಿಸಿದರೆ ಇಲಾಖೆ ನಿಗದಿಪಡಿಸಿದ ದರ ಒಂದಕ್ಕೆ 50 ಪೈಸೆಯಂತೆ ತಯಾರಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ನಿರಂತರ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಜೈವಿಕ ಸ್ಥರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ವಾತಾವರಣ ಹಾಗೂ ಮುಂದಿನ ಪೀಳಿಗೆ ಕೃಷಿ ಪದ್ಧತಿ ಮೇಳೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಮಣ್ಣಿನ ಜೀವ ವೈವಿಧ್ಯತೆ ಕಾಪಾಡಲು ವಿವಿಧ ಜೈವಿಕ ಪರಿಕರ ವೃದ್ಧಿಪಡಿಸಿ ರೈತರಿಗೆ ನಿಗದಿತ ದರದಲ್ಲಿ ವಿತರಿಸಲಾಗುತ್ತಿದೆ. ಜೈವಿಕ ಗೊಬ್ಬರ, ನಿಯಂತ್ರಕಗಳಾದ ಟ್ರೆ ೖಕೋಡರ್ಮಾ ಪ್ರತಿ ಕೆಜಿಗೆ 120 ರೂ., ಸೊಡೋಮೊನಾಸ್ 120 ರೂ., ಪಿಎಸ್‌ಬಿ 50 ರೂ., ಅಜಟೋಬ್ಯಾಕ್ಟರ್ 50 ರೂ., ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ 100 ರೂ., ಬಯೋಮಿಕ್ಸ್ 20 ರೂ., ವ್ಯಾಮ್ 25 ರೂ. ದರ ನಿಗದಿ ಇರುತ್ತದೆ. ಸಸ್ಯ ಸಂತೆಯಲ್ಲಿ ಇವುಗಳ ಪ್ರದರ್ಶನ ಮಾಡಲಾಗುತ್ತಿದೆ ಎಂದು ವಿವರಿಸಿದರು. ಸಸ್ಯ ಸಂತೆಯಲ್ಲಿ ಸಸಿಗಳನ್ನು ಕಸಿ ಮಾಡುವ ವಿಧಾನದ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೈಜಯಂತಾ ಕದಂ, ಟಿ.ಆಂಜನೇಯ, ಸಹಾಯಕ ತೋಟಗಾರಿಕೆ ನಿರ್ದೇಶಕ ಮೊಹಮ್ಮದ್ ಸಮಿಯುದ್ದೀನ್, ಶಿವುಕುಮಾರ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ನಿಸಾರ್ ಅಹ್ಮದ್, ಶ್ರೀಧರ ಸೇರಿದಂತೆ ಇಲಾಖೆ ಸಿಬ್ಬಂದಿ ಹಾಗೂ ರೈತರು, ಸಾರ್ವಜನಿಕರು ಇದ್ದರು.