Advertisement

ಕಂಟೇನ್ಮೆಂಟ್‌ ಝೋನ್‌ನಲ್ಲಿ ಮನೆ ಮನೆ ಸರ್ವೆ

06:52 PM May 15, 2020 | Naveen |

ಯಾದಗಿರಿ: ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ವಲಸೆ ಹೋದವರು ಬೇರೆಯವರಲ್ಲ. ಅವರು ಕೂಡ ನಮ್ಮವರಾಗಿದ್ದಾರೆ. ಕ್ವಾರಂಟೈನ್‌ ಮಾಡಿದಾಕ್ಷಣ ಅವರಿಗೆ ಸೋಂಕಿದೆ ಎಂದಲ್ಲ. ಮುಂಜಾಗ್ರತೆಯಾಗಿ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿ ಪ್ರತ್ಯೇಕವಾಗಿ ಇರಿಸಬೇಕಿದೆ. ಇದಕ್ಕೆ ಯಾರಾದಾರೂ ವಿರೋಧ ವ್ಯಕ್ತಪಡಿಸಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ ಎಚ್ಚರಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿದ ಕಾರಣ ದೇಶದ ಇತರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಜಿಲ್ಲೆಗೆ ವಾಪಸ್ಸಾಗುತ್ತಿದ್ದಾರೆ. ಅವರನ್ನು ಕ್ವಾರಂಟೈನ್‌ ಮಾಡಲು ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಹೊರ ರಾಜ್ಯಗಳಿಂದ ಬಂದವರಿಗಾಗಿ ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳು ಹಾಗೂ ಮೂಲಸೌಕರ್ಯಗಳಿರುವ ಶಾಲೆಗಳನ್ನು ಕ್ವಾರಂಟೈನ್‌ ಕೇಂದ್ರಗಳಾಗಿ ಬಳಸಿಕೊಳ್ಳಲಾಗುತ್ತಿದೆ. ರೈಲ್ವೆ ಮೂಲಕ ಜಿಲ್ಲೆಗೆ 269 ಜನ ಕಾರ್ಮಿಕರು ಬಂದಿದ್ದಾರೆ. ಹೊರ ರಾಜ್ಯಗಳಿಂದ 4 ಸಾವಿರಕ್ಕಿಂತ ಹೆಚ್ಚಿನ ಕಾರ್ಮಿಕರು ಜಿಲ್ಲೆಗೆ ಬಂದಿದ್ದು, ಅವರನ್ನು ನೇರವಾಗಿ ಇನ್‌ಸ್ಟಿಟ್ಯೂಶನಲ್‌ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗಿದೆ. ಇನ್ನು ಬೇರೆ ಜಿಲ್ಲೆಗಳಿಂದ ಬಂದವರಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಆರೋಗ್ಯ ತಪಾಸಣೆಗೊಳಪಡಿಸಿ ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಅವರಿಗೆ ಸ್ಟ್ಯಾಂಪ್ ‌ ಕೂಡ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್‌. ಪಾಟೀಲ ಇದ್ದರು.

ಎಲ್ಲೆಲ್ಲಿ ನಾಕಾ ಬಂದಿ?
ಜಿಲ್ಲೆಯ ಸುರಪುರ ನಗರದಲ್ಲಿ ಎರಡು ಕೋವಿಡ್‌-19 (ಪಿ-867, ಪಿ-868) ಪಾಸಿಟಿವ್‌ ಪ್ರಕರಣಗಳು ಕಂಡುಬಂದ ಕಾರಣ 100 ಮೀಟರ್‌ ವ್ಯಾಪ್ತಿಯಲ್ಲಿನ ವಾರ್ಡ್‌ ಸಂಖ್ಯೆ 10ರ ಆಸರ್‌
ಮೊಹಲ್ಲಾವನ್ನು ಕಂಟೇನ್ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದೆ. ನಿಯಂತ್ರಿತ ವಲಯದ ಎಲ್ಲ ಪ್ರವೇಶ ದ್ವಾರಗಳಲ್ಲೂ ಶಾಶ್ವತವಾಗಿ ತಡೆಗೋಡೆ ಹಾಕುವ ಮೂಲಕ ನಾಕಾಬಂದಿ ಮಾಡಲಾಗಿದೆ. ಕಂಟೇನ್ಮೆಂಟ್‌ ಝೋನ್‌ನಲ್ಲಿ ಮನೆಮನೆ ಸರ್ವೇ ನಡೆಸಲಾಗುವುದು. ಸರ್ವೇ ಪ್ರಕಾರವಾಗಿ ಕೋವಿಡ್‌19 ಪರೀಕ್ಷೆ ನಡೆಸಲಾಗುವುದು. ಜಿಲ್ಲೆಯಲ್ಲಿ ಟೆಸ್ಟ್‌ ಲ್ಯಾಬ್‌ ಸ್ಥಾಪನೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಲ್ಯಾಬ್‌ ಅನುಷ್ಠಾನಕ್ಕೆ ಬಂದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳ ಪರೀಕ್ಷೆ ನಡೆಸಲು ಅನುಕೂಲವಾಗಲಿದೆ. ಜಿಲ್ಲೆಯ 5 ಜ್ವರ ತಪಾಸಣೆ ಕೇಂದ್ರಗಳಲ್ಲಿ ಮೇ 13ರವರೆಗೆ ಒಟ್ಟು 32236 ಜನರ ಜ್ವರ ತಪಾಸಣೆ ಮಾಡಲಾಗಿದೆ. ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next