Advertisement

ಏಪ್ರಿಲ್‌ 1 ದಾಸೋಹ ದಿನವನ್ನಾಗಿ ಪರಿಗಣಿಸಿ: ಸ್ವಾಮೀಜಿ

04:55 PM Apr 05, 2019 | Team Udayavani |

ಯಾದಗಿರಿ: ತ್ರಿವಿಧ ದಾಸೋಹದ ಮೂಲಕ ನಡೆದಾಡುವ ದೇವರು ಎಂದು ಪರಿಗಣಿಸಲ್ಪಡುವ ಡಾ| ಶಿವಕುಮಾರ ಮಹಾಸ್ವಾಮಿಗಳ ಏಪ್ರಿಲ್‌ ಒಂದನೇ ದಿನದ ಜಯಂತ್ಯುತ್ಸವವನ್ನು ದಾಸೋಹ ದಿನವನ್ನಾಗಿ ಪರಿಗಣಿಸಿ ಆಚರಣೆ ಮಾಡುವಂತಾಗಬೇಕು. ಅಂದಾಗ ಅವರ ಜಯಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಮಹತ್ವ ಹೆಚ್ಚಾಗುತ್ತದೆ ಎಂದು ವಿಶ್ವಕರ್ಮ ಏಕಡಂಡಿಗಿಮಠದ ಶ್ರೀನಿವಾಸ ಸ್ವಾಮಿಗಳು ಅಭಿಪ್ರಾಯಪಟ್ಟರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜ, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌, ವೀರಶೈವ ಸರಕಾರಿ ನೌಕರರ ಸಂಘ ಹಾಗೂ ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಸಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ| ಶಿವಕುಮಾರ ಮಹಾಸ್ವಾಮಿಗಳ 112ನೇ ಜಯಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಪೂಜೆಯಲ್ಲಿ ಭಕ್ತರನ್ನು ಕಂಡ ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರು ಎನಿಸಿಕೊಂಡಿದ್ದಾರೆ. ಜಾತಿ, ಮತ, ಧರ್ಮ ಮೀರಿ ಪೂಜಿಸುವಂತ ಇವರ ಮೌಲ್ಯಗಳ ನಾಮ ಸ್ಮರಣೆಯೇ ನಮಗೆ ಪವಿತ್ರವಾದದು ಎಂದು ಹೇಳಿದರು. ಚಟ್ನಳ್ಳಿ ಹಿರೇಮಠದ ವಿಶ್ವರಾಧ್ಯ ದೇವರು ಮಾತನಾಡಿ, ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿಲ್ಲ. ಲಿಂಗಾ ಉದ್ಭವ ಆಗಿದ್ದಾರೆ. ಅವರ ಕಾಯಕ ತತ್ವ, ತ್ರಿವಿಧ ದಾಸೋಹ, ಮಾನವೀಯ ಮೌಲ್ಯಗಳು ನಮ್ಮಂತ ಸ್ವಾಮಿಗಳಿಗೆ ಮಾದರಿಯಾಗಬೇಕಾಗಿದೆ. ಏನನ್ನು ಬಯಸದೇ ಸೇವಾ ಮನೋಭಾವದೊಂದಿಗೆ ಅವರು ಮಾಡಿದ ಸಾಧನೆ
ದೈವಿ ಶಕ್ತಿ ಕಾಣುವಂತೆ ಮಾಡಿದೆ. ನಾವು ಅವರ ಆದರ್ಶ ವಿಚಾರಗಳೊಂದಿಗೆ ನಡೆದಾಗ ಕಾರ್ಯಕ್ರಮದ ಮಹತ್ವ ಹೆಚ್ಚಾಗುತ್ತದೆ ಎಂದು ಕಿವಿಮಾತು ಹೇಳಿದರು.

ಅಖೀಲ ಭಾರತ ವೀರಶೈವ ಸಮಾಜ ನಗರ ಘಟಕದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಸಾಧನೆ ಪ್ರಶಸ್ತಿಗಳಿಗೆ ಮೀರಿದ್ದಾಗಿದೆ. ಅವರ ಜನ್ಮ ದಿನವಾದ ಏಪ್ರಿಲ್‌ ತಿಂಗಳಿನ ಒಂದನೇ ದಿನವನ್ನು ಗುರುವಂದನಾ, ಕಾಯಕ ದಾಸೋಹ ದಿನ ಎಂದು ಪ್ರತಿ ತೂಗು ಪಂಚಾಂಗ ಸೇರಿದಂತೆ ದಿನಚರಿಗಳಲ್ಲಿ ಮುದ್ರಣವಾಗಬೇಕು. ಅಲ್ಲದೆ ಅವರ ದಾಸೋಹ ಬದಕನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಪ್ರತಿಯೊಬ್ಬರು ಮಾಡಬೇಕು.  ಈಗಾಗಲೇ ಅವರ ಭಕ್ತಾದಿಗಳು ತಮ್ಮ ಮಕ್ಕಳಿಗೆ ಶ್ರೀಗಳ ಹೆಸರಿನೊಂದಿಗೆ ನಾಮಕರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಬದುಕು ಚೈತನ್ಯವನ್ನುಂಟು ಮಾಡುವಂತಿದೆ. ತಮ್ಮ ಸಾಧನೆಯೊಂದಿಗೆ ದೈವಿಶಕ್ತಿ ಸ್ವರೂಪ ಪಡೆದ ಮಹಾಸ್ವಾಮಿಗಳ ಜಯಂತಿ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಆಚರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅವರ ತತ್ವ ಆದರ್ಶಗಳನ್ನು ನಾವು ಪಾಲಿಸೋಣ ಎಂದು ಹೇಳಿದರು.

Advertisement

ವೀರಶೈವ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕಾಂತ ಕಶೆಟ್ಟಿ, ಅಖೀಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಆರ್‌. ಮಹಾದೇವಪ್ಪ ಅಬ್ಬೆತೂಮಕುರ, ಸಿದ್ದಗಂಗಾಮಠದ ಹಳೆ ವಿದ್ಯಾರ್ಥಿಗಳ ಸಂಘದ ರವೀಂದ್ರ ಜಾಕಾ, ಕಿರಾಣಿ ವ್ಯಾಪಾರಿಗಳಾದ ಸಂಗಪ್ಪ ಲಾಳಸಂಗಿ ಇದ್ದರು. ಶಿವಾನಿ ಶೀಲವಂತ ಪ್ರಾರ್ಥಾನಾಗೀತೆ ಹಾಡಿದಳು. ನೀಲಕಂಠ ಶೀಲವಂತ ಸ್ವಾಗತಿಸಿದರು. ನೀಲಕಂಠ ಎಲ್ಹೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮೋಟ್ನಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next