ಯಾದಗಿರಿ: ಜಿಲ್ಲಾದ್ಯಂತ ನೂರಾರು ಜನರಿಗೆ ಶೇಂಗಾ ಎಣ್ಣೆ ತೆಗೆಯುವ ಯಂತ್ರ ಒದಗಿಸಿ ಉತ್ಪಾದಿತ ಶೇಂಗಾ ಎಣ್ಣೆ ಖರೀದಿ ಮಾಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂ. ಕಟ್ಟಿಸಿಕೊಂಡಿದೆ ಎಂದು ಆರೋಪಿಸಿ ಹೈದ್ರಾಬಾದ್ ಮೂಲದ ಗ್ರೀನ್ ಗೋಲ್ಡ್ ಬಯೋ ಟೆಕ್ ಕಂಪೆನಿ ವಿರುದ್ಧ ನೊಂದವರು ಎಸ್ಪಿಗೆ ದೂರು ಸಲ್ಲಿಸಿದರು.
ಗ್ರೀನ್ ಗೋಲ್ಡ್ ಕಂಪೆನಿಯಿಂದ ವಂಚನೆಗೊಳಗಾದ ಪ್ರತಿಭಾ ಎಸ್. ಸೋನಾರ್ ಹಾಗೂ ಇತರೆ 30 ಜನರು ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡಿದ್ದು, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಕಂಪೆನಿಯವರು ನಿಮಗೆ ಶೇಂಗಾ ಎಣ್ಣೆ ತೆಗೆಯುವ ಯಂತ್ರ ಕೊಡುತ್ತೇವೆ. ಶೇಂಗಾ ಕಾಳು ಪೂರೈಸುತ್ತೇವೆ ಮತ್ತು ಅದರಿಂದ ಉತ್ಪಾದನೆಯಾಗುವ ಎಣ್ಣೆಯನ್ನು ಖರೀದಿಸುತ್ತೇವೆ ಹಾಗೂ ಲೇಬರ್ ಚಾರ್ಜಸ್ ಕೂಡ ಕೊಡುತ್ತೇವೆ ಎಂದು ಹೇಳಿ ಒಪ್ಪಂದ ಪತ್ರ ಬರೆಯಿಸಿಕೊಂಡು 25 ಜನರಿಂದ 1 ಲಕ್ಷ, 5 ಜನರಿಂದ 2 ಲಕ್ಷ ಹಾಗೂ ಒಬ್ಬರಿಂದ 5 ಲಕ್ಷ ರೂ.ಗಳನ್ನು ಪ್ರತ್ಯೇಕವಾಗಿ ಪಡೆದುಕೊಂಡು ಯಂತ್ರವೊಂದನ್ನು ನೀಡಿದ್ದು, ಒಪ್ಪಂದ ಪತ್ರದಲ್ಲಿ ತಿಳಿಸಿದಂತೆ ತಾಲೂಕಿಗೊಂಡು ಸ್ಟಾಕ್ ಪಾಯಿಂಟ್ ಮಾಡಿ ಅಲ್ಲಿ ಎಲ್ಲ ವ್ಯವಹಾರಗಳನ್ನು ಮಾಡಲಾಗುವುದು ಜಿಲ್ಲೆಗೊಂದು ಕಚೇರಿ ಇರುತ್ತದೆ ಎಂದು ತಿಳಿಸಿದ್ದರು. ಅಲ್ಲದೇ ಶೇಂಗಾ ಎಣ್ಣೆಯ ಉಪ ಉತ್ಪನ್ನವಾದ ಇಂಡಿಯನ್ನು ಸಹ ನಾವು ಖರೀದಿಸುತ್ತೇವೆ ಎಂದು ಸಹ ಅದರಲ್ಲಿ ಹೇಳಲಾಗಿತ್ತು ಎಂದು ನೊಂದವರು ಮನವಿಯಲ್ಲಿ ತಿಳಿಸಿದ್ದಾರೆ.
ಯಂತ್ರ ನೀಡಿದ ನಂತರ ಯಾವುದೇ ಶೇಂಗಾ ಬೀಜಗಳನ್ನು ನೀಡದೇ ಯಾವುದೇ ಎಣ್ಣೆಯನ್ನು ಖರೀದಿ ಮಾಡದೇ ವಂಚಿಸಿರುತ್ತಾರೆ. ಶೇಂಗಾ ಇಂಡಿಯನ್ನು ಸಹ ಖರೀದಿಸಿಲ್ಲ. ಅದರ ಹಣವನ್ನು ನೀಡಿಲ್ಲ. ಮತ್ತು ಇದುವರೆಗೆ ಯಾವುದೇ ಲೇಬರ್ ಚಾರ್ಜ ಅನ್ನು ಮಾಸಿಕ ವೇತನವನ್ನು ಸಹ ನಮ್ಮ ಖಾತೆಗೆ ಹಾಕದೆ ವಂಚಿಸಿದ್ದಾರೆಂದು ದೂರಿದ್ದಾರೆ.
ಯಾದಗಿರಿಯಲ್ಲಿ ಹೀಗೆ 31 ಜನರು ವಂಚನೆಗೊಳಗಾಗಿರುವುದು ಮೇಲ್ನೋಟಕ್ಕೆ ತಿಳಿದಿದ್ದು, ಇದೇ ರೀತಿ ಜಿಲ್ಲೆಯಲ್ಲಿ ಎಷ್ಟು ಜನರಿದ್ದಾರೊ ಎನ್ನುವ ಅನುಮಾನ ವ್ಯಕ್ತವಾಗಿದೆ. ಸಂಬಂಧಿಸಿದವರನ್ನು ಸಂಪರ್ಕಿಸಿದರೆ ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದು ಹುಸಿ ಭರವಸೆ ನೀಡುತ್ತಿದ್ದು, ಒಂದು ತಿಂಗಳಲ್ಲಿ ಈ ವ್ಯವಸ್ಥೆ ಮಾಡುವುದಾಗಿ ಹೇಳಿ ಇದೀಗ ಮತ್ತೆ ಮೂರು ತಿಂಗಳು ಕಳೆಯುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ನೊಂದವರು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಕಂಪನಿಯನ್ನು ಪರಿಚಯಿಸಿದವರ ಹೆಸರಿನ ಸಮೇತ ದೂರು ನೀಡಿದ್ದು, ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಪಂಗನಾಮ ಹಾಕಿ ಹೋದ ಈ ಕಂಪೆನಿಯ ವಿರುದ್ದ ಕಠಿಣ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ನೇತೃತ್ವದಲ್ಲಿ ಮಹಿಳೆಯರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಾ ಎಸ್. ಸೋನಾರ್, ಅಂಬ್ರಮ್ಮ ಎಸ್. ಸ್ವಾಮಿ, ಪ್ರಭಾವತಿ ಜೆ, ವೆಂಕಟರೆಡ್ಡಿ, ದೇವೀಂದ್ರ, ರವಿಕುಮಾರ, ಮುನಿಯಪ್ಪ, ಭೀಮಣ್ಣ ದೊರೆ, ನಾಗಮ್ಮ ಎನ್, ಸೀತಮ್ಮ ಅಯ್ಯಣ್ಣ, ಶಿವನಾಗಮ್ಮ , ಪಾರ್ವತಿ, ಭಾರತಿ, ಸುಮತಿ, ಲಕ್ಷ್ಮೀ ತಡಿಬಿಡಿ, ಈರಮ್ಮ, ರೇಣುಕಾ ಓಂ ಪ್ರಕಾಶ, ಬನ್ನಮ್ಮ, ಸುನಿತಾ ಗಂ., ಪಾರ್ವತೆಮ್ಮ ಕರಣಿಗಿ, ಭಾಗ್ಯಶ್ರೀ, ವಿಜಯಲಕ್ಷ್ಮೀ, ಸೃಷ್ಟಿ, ಶಿವಕಾಂತಮ್ಮ, ನಿಂಬಮ್ಮ ಪಾಟೀಲ, ಪಾರ್ವತಮ್ಮ ಪತ್ತಾರ, ವಿಜಯಕುಮಾರ ಶಿರಗೋಳ, ವೀರೇಶ ಭಾವಿ, ಸಾಯಿಬಣ್ಣ ಪಾಂಚಾಳ, ಸಿದ್ದಣ್ಣ ಶೆಟ್ಟಿ ಇನ್ನಿತರರು ಇದ್ದರು.