ಅನೀಲ ಬಸೂದೆ
ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿರುವ ಮುಂಡರಗಿ ಗ್ರಾಮದ ಎರಡು ಶಾಲೆ ಮಕ್ಕಳಿಗೆ ಬಯಲಲ್ಲೇ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರ ಮೂಲಸೌಕರ್ಯಗಳಿಲ್ಲದೇ ಪರಿತಪಿಸುವಂತಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಗಾಡ ನಿದ್ದೆಯಲ್ಲಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮುಖ್ಯ ಶಿಕ್ಷಕ ಸೇರಿ 14 ಜನ ಶಿಕ್ಷಕರಿದ್ದಾರೆ. 570ಕ್ಕೂ ಹೆಚ್ಚು ಮಕ್ಕಳಿದ್ದು ಸಮರ್ಪಕ ಕಟ್ಟಡ ವ್ಯವಸ್ಥೆಯಿಲ್ಲದೇ ಅನಿವಾರ್ಯವಾಗಿ ಶಾಲೆ ಆವರಣದಲ್ಲಿನ ಟೀನ್ ಶೆಡ್‌ನಲ್ಲಿ ಪಾಠ ಕೇಳುವಂತಾಗಿದೆ.
ಶಾಲೆಗೆ ಒಟ್ಟು 7 ಕೋಣೆಗಳಿವೆ. ಇದರಲ್ಲಿಯೇ ಒಂದರಲ್ಲಿ ಕಚೇರಿಗೆ ಉಪಯೋಗಿಸಿಕೊಳ್ಳುತ್ತಿದೆ. ಉಳಿದ ಚಿಕ್ಕದಾದ 6 ಕೋಣೆಯಲ್ಲಿ ಪಾಠ ಬೋಧಿಸಲಾಗುತ್ತಿದೆ. ಪಾಠದ ವೇಳೆ ಗದ್ದಲದಿಂದ ಯಾವೊಬ್ಬ ಮಗುವೂ ಸರಿಯಾಗಿ ಪಾಠ ಅರ್ಥೈಸಿಕೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗಿದೆ.
4 ಕೋಣೆ ನಿರ್ಮಾಣ ವಿಳಂಬ: ಮೊದಲೇ ಕಟ್ಟಡದ ಕೊರತೆಯಿಂದ ನಲುಗಿರುವ ವಿದ್ಯಾರ್ಥಿಗಳಿಗೆ ಇನ್ನೂ ಹೊಸ ಕಟ್ಟಡ ಬಳಕೆಗೆ ಸಿದ್ಧವಾಗುವುದು ವಿಳಂಬವಾಗುತ್ತಿದೆ. 2017-18ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 1 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಗ್ರಂಥಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ 4 ಕೋಣೆಗಳ ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ನೀಡಲಾಗಿದೆ. ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉರ್ದು ಶಾಲೆಗೆ ಒಂದೇ ಕೋಣೆ: ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೆ ಸರ್ಕಾರಿ ಉರ್ದು ಮಾಧ್ಯಮ ಶಾಲೆಯೂ ಇದೆ. 5 ಜನ ಸಿಬ್ಬಂದಿಗಳಿದ್ದು. 69 ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಆಗಮಿಸುತ್ತಿದ್ದಾರೆ. ಈ ಹಿಂದೆ ಎರಡು ಕೋಣೆಗಳಲ್ಲಿ ತರಗತಿ ನಡೆಯುತ್ತಿತ್ತು. ಕಳೆದ ಜುಲೈ ತಿಂಗಳಲ್ಲಿ ಹಳೆ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಭಾಗ ಕುಸಿದು ಬಿದ್ದು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಹೆದರಿರುವ ಶಿಕ್ಷಕರು ಅದನ್ನೆ ಮುಚ್ಚಿದ್ದಾರೆ. ಸದ್ಯ ಇರುವ ಒಂದು ಚಿಕ್ಕ ಕೋಣೆಯಲ್ಲಿ ಕೆಲ ಮಕ್ಕಳನ್ನು ಕೂಡಿಸಲಾಗುತ್ತಿದ್ದು, ಉಳಿದ ಮಕ್ಕಳನ್ನು ಗ್ರಾಪಂನಿಂದ ನಿರ್ಮಿಸಲಾದ ಟೀನ್ ಶೆಡ್‌ನಲ್ಲಿಯೇ ಎರಡು ತರಗತಿ ನಡೆಸುವ ಅನಿವಾರ್ಯತೆ ಎದುರಾಗಿದೆ.
ಶಿಕ್ಷಣ ಇಲಾಖೆ 2018-19ನೇ ಸಾಲಿನ ರಾಜ್ಯ ವಲಯ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಕೆಲ ತಿಂಗಳ ಹಿಂದೆಯಷ್ಟೇ ಸ್ಥಳ ಗುರುತಿಸಿದ್ದು, ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ಜವಾಬ್ದಾರಿ ವಹಿಸಲಾಗಿದೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ ಇನ್ನೂ ಗ್ರಾಮೀಣ ಭಾಗದ ಶಾಲೆಗಳಿಗೆ ಸಕಾಲಕ್ಕೆ ಸಮರ್ಪಕ ಮೂಲಸೌಕರ್ಯ ಒದಗಿಸುವಲ್ಲಿ ಆಡಳಿತ ವರ್ಗ ಸೂಕ್ತ ಕಾಳಜಿ ವಹಿಸಬೇಕಿದೆ.