Advertisement

ಯಾದಗಿರಿ-ರಾಯಚೂರು ಅಭಿವೃದ್ಧಿಗೆ ಬದ್ಧ

04:09 PM Oct 03, 2019 | Naveen |

ಸುರಪುರ: ಪ್ರಧಾನ ಮಂತ್ರಿಗಳ ಮಹತ್ವಕಾಂಕ್ಷಿ ಯೋಜನೆಯಡಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಯೋಜನೆಯಡಿ ಕೇಂದ್ರದಿಂದ ಸಾಕಷ್ಟು ಅನುದಾನ ಹರಿದು ಬರಲಿದ್ದು, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

Advertisement

ಮಹಾತ್ಮ ಗಾಂಧೀಜಿ ಜನ್ಮದಿನದ 150ನೇ ವರ್ಷಾಚರಣೆ ಅಂಗವಾಗಿ ಶಾಸಕ ರಾಜುಗೌಡ ಅವರು ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನಾ ಹಾಗೂ ವಾರ್ಡ್‌ ಪಾದಯಾತ್ರೆಯಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ಬಿ.ವಿ. ಸದಾನಂದಗೌಡ ಅವರು ಶೀಘ್ರದಲ್ಲೇ ರಾಯಚೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಮಹತ್ವಕಾಂಕ್ಷೆ ಜಿಲ್ಲೆಯೋಜನೆಗೆ ಚಾಲನೆ ನೀಡುವರು. ಇದರಿಂದ ರಾಯಚುರು, ಯಾದಗಿರಿ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೆರೆ ಪ್ರವಾಹ ನಷ್ಟ ಭರಿಸಲು ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಮಾತ್ರ ಪ್ರವಾಹ ಉಂಟಾಗಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಈ ಬಾರಿ ನೆರ ಹಾವಳಿ ಸೃಷ್ಟಿಯಾಗಿದೆ. ಎಲ್ಲ ರಾಜ್ಯಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತಿರುವ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೆ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ನರೆ ಹಾವಳಿ ಕುರಿತು ಈಗಾಗಲೇ ರಾಜ್ಯದ ಸಂಸದರೆಲ್ಲರೂ ಸೇರಿ ಪ್ರಧಾನಿಗಳಿಗೆ ಮನವರಿಕೆ ಮಾಡಿದ್ದೇವೆ. ಎಲ್ಲ ರಾಜ್ಯಗಳಿಗೂ ನೀಡುವಂತೆ ನಮಗೂ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ ನೆರೆ ಹಾವಳಿ ವಿಷಯದಲ್ಲಿ ವ್ಯರ್ಥ ಆರೋಪ ಮಾಡುತ್ತಿರುವುದರಲ್ಲಿ ಹುರುಳಿಲ್ಲ ಎಂದರು. ಫಸಲ್‌ ಬಿಮಾ ಯೋಜನೆಯಡಿ ಲೋಕಸಭಾ ಕ್ಷೇತ್ರದ ಅರ್ಹ ರೈತರಿಗೆ 180ರಿಂದ 200 ಕೋಟಿ ರೂ. ಬಿಡುಗಡೆಯಾಗಿದೆ. ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದ್ದು, ಅಪ್‌ಲೋಡ್‌ ಮಾಡುವಲ್ಲಿ ಅಧಿಕಾರಿಗಳಿಂದ ವಿಳಂಬವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಯೋಜನೆ ಲಾಭವನ್ನು ತ್ವರಿತವಾಗಿ ರೈತರಿಗೆ ತಲುಪಿಸಲು ಶ್ರಮಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಿಸಾನ್‌ ಸಮ್ಮಾನ್‌ ಯೋಜನೆ ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರೈತರನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲು ಪ್ರಧಾನ ಮಂತ್ರಿಗಳು ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೊಳಿಸಿದ್ದರೂ ಅರ್ಹ ರೈತರನ್ನು ತಲುಪಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಪ್ರತಿಶತ ತಲುಪಲು ಸಾಧ್ಯವಾಗಿಲ್ಲ. ಮೊದಲ ಕಂತಿನ ಅನುದಾನದಿಂದ ವಂಚಿತವಾದರೂ 2ನೇ ಕಂತಿನ ಅನುದಾನಕ್ಕೆ ಅವರನ್ನು ಒಳಪಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಎರಡು ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ.

ರೈತರು ಕೂಡ ಈ ಬಗ್ಗೆ ಜಾಗೃತಿ ವಹಿಸಬೇಕು. ಯೋಜನೆ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಪಕ್ಷದ ಕಾರ್ಯಕರ್ತರು ಈ ಯೋಜನೆ ಮಾಹಿತಿ ರೈತರಿಗೆ ತಲುಪಿಸಿ ಪ್ರತಿಶತಕ್ಕೆ ಶ್ರಮಿಸಬೇಕು. ಪ್ರಧಾನಿಗಳ ಕನಸಿನ ಯೋಜನೆಗಳಿಗೆ ಕೈ ಜೋಡಿಸಬೇಕು ಎಂದರು.

Advertisement

ಪ್ರಧಾನ ಮಂತ್ರಿಗಳ ಸೂಚನೆ ಮೇರೆಗೆ ಗಾಂದೀಜಿಯವರ 150ನೇ ವರ್ಷಾಚರಣೆ ಅಂಗವಾಗಿ ಪ್ರತಿಯೊಬ್ಬ ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 20 ಕಿ.ಮೀ. ಪಾದಯಾತ್ರೆ ನಡೆಸಿ ಗಾಂ ಧೀಜಿಯ ತತ್ವ-ಸಿದ್ಧಾಂತ ಹಾಗೂ ಸ್ವತ್ಛತೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಈ ಆಂದೋಲನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಶಾಸಕ ನರಸಿಂಹ ನಾಯಕ (ರಾಜೂಗೌಡ), ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರು, ಜಿಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ, ರಾಜಾ ಹಣುಮಪ್ಪ ನಾಯಕ ತಾತಾ, ದೇವರಾಜ ನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next