ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಡದಂಡೆ – ಬಲದಂಡೆ ಕಾಲುವೆಗೆ ಮಾ.31 ರವರೆಗೂ ನೀರು ಹರಿಸುವುದಾಗಿ ಹೇಳಿರುವ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಆದೇಶಕ್ಕೆ ಕೊನೆ ಭಾಗದ ರೈತರು ಕಣ್ಣೀರು ಇಡುವಂತಾಗಿದೆ.
ನಾಟಿ ಮಾಡಿದ ಭತ್ತ ಹಾಗೂ ಕೊನೆ ಭಾಗದಲ್ಲಿ ಶೇಂಗಾ ಸಜ್ಜೆ ಬೆಳೆದ ರೈತರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಹುತೇಕ ಬೆಳೆಗಳು ರೈತರ ಕೈ ಸೇರಬೇಕಾದರೆ ಏಪ್ರಿಲ್ 10 ವರೆಗೂ ನೀರು ಅಗತ್ಯವಿದೆ ಎಂದು ರೈತಾಪಿ ಜನರ ಒತ್ತಾಯ ಕೇಳಿಬರುತ್ತಿದೆ.
ದೇವದುರ್ಗ, ಶಹಾಪುರ, ವಡಗೇರಾ ತಾಲೂಕು ಕೊನೆ ಭಾಗದ ರೈತರಿಗೆ ನೀರೇ ತಲುಪುವುದಿಲ್ಲ. ಹುಣಸಗಿ-ಸುರಪುರ ಈ ಭಾಗದಲ್ಲಿ ಈಗಾಗಲೇ ಭತ್ತದ ಬೆಳೆಗಳು ಹಸಿರು ತೆನೆ ಹಿರಿದಿವೆ. ಹಾಗೇ ನಾಟಿ ಮಾಡಿದ ಭತ್ತ ಬೆಳೆಗಳು ಹಸಿರಾಗಿವೆ. ತೆನೆ ಮಾತ್ರ ಹಾಕಿಲ್ಲ. ನಡು ಹಂತದಲ್ಲಿಯೇ ಬೆಳೆಗಳು ಒಣಗಿ ನಷ್ಟವಾಗಲಿವೆ ಎಂದು ರೈತರಿಗೆ ಚಿಂತೆಗೀಡು ಮಾಡಿದೆ.
ಮುಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಬೆಲೆ ಇಲ್ಲದೆ ಕೈ ಸುಟ್ಟುಕೊಂಡ ಅನ್ನದಾತನಿಗೆ ಈಗಾ ನೀರಿನ ಸಂಕಷ್ಟವೂ ಎದುರಾಗಿದೆ. ಏ.10 ವರೆಗೂ ನೀರು ಹರಿಸಬೇಕೆಂದು ರೈತ ಸಂಘಟನೆಗಳ ಒತ್ತಾಯಕ್ಕೆ ಬೆಲೆ ಇಲ್ಲ. ಆತ್ಮಹತ್ಯೆ ದಾರಿ ಒಂದೇ ರೈತರದಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬುಚ್ಚಪ್ಪನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಣಸಗಿ-ಸುರಪುರ ತಾಲೂಕಿನಲ್ಲಿ 54 ಸಾವಿರ ಹೆಕ್ಟೇರ್ ಪ್ರದೇಶಲ್ಲಿ ಭತ್ತ ನಾಟಿ ಮಾಡಲಾಗಿದೆ. ಅದಾಗ್ಯೂ ದೇವದುರ್ಗ ತಾಲೂಕಿನಲ್ಲಿ ಮೂರಸಾವಿರ ಹೆಕ್ಟೇರ್ ಶೇಂಗಾ, ಸಜ್ಜೆ ಹಾಕಲಾಗಿದೆ. ಇಂಕಟಾಗಿ 30 ಸಾವಿರ ಹೆಕ್ಟೇರ್ ಪ್ರದೇಶಲ್ಲಿ ಭತ್ತ ನಾಟಿಮಾಡಲಾಗಿದೆ. ಮಾ.31 ವರೆಗೆ ನೀರು ಹರಿಸಿದ್ದಲ್ಲಿ ಶೇ.15ರಷ್ಟು ವಿವಿಧ ಬೆಳೆ ನಷ್ಟ ಹೊಂದಲಿವೆ ಎಂದು ರಾಜ್ಯ ರೈತ ಸಂಘದ ದೇವದುರ್ಗ ತಾಲೂಕಾಧ್ಯಕ್ಷ ಬೂದಯ್ಯಸ್ವಾಮಿ ಗಬ್ಬೂರು ಅಸಮಾಧನ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಕೋವಿಡ್-19ನಿಂದ ತತ್ತರಿಸಿದ ರೈತರ ಜೀವನಕ್ಕೆ ಹಿಂಗಾರು ಬೆಳೆಗಳೇ ಜೀವನಕ್ಕೆ ಉಸಿರು. ಶ್ರಮವಹಿಸಿ ಬೆಳೆದ ಬೆಳೆಗಳು ರೈತರ ಕೈ ಸೇರುವರೆಗೂ ನೀರು ಹರಿಸಿದಲ್ಲಿ ಜೀವನ ಸುಧಾರಿಸಬಹುದು. ಇಲ್ಲದಿದ್ದರೆ ಕೈ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ರೈತರು ಒತ್ತಾಯವಾಗಿದೆ.
ಬಾಲಪ್ಪ ಎಂ.ಕುಪ್ಪಿ