Advertisement

ವಿಮೆ ಮಾಡಿಸಲು ರೈತರ ಹಿಂದೇಟು!

11:16 AM Jul 18, 2019 | Naveen |

ಅನೀಲ ಬಸೂದೆ
ಯಾದಗಿರಿ
: ಜಿಲ್ಲೆಯ ರೈತರಿಗೆ 2018-19ನೇ ಸಾಲಿನ ಬೆಳೆ ವಿಮೆ ಹಣ ಬಾರದೇ ಇರುವುದರಿಂದ ಪ್ರಸಕ್ತ ವರ್ಷದಲ್ಲಿ ಬೆಳೆ ವಿಮೆ ಮಾಡಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ.

Advertisement

ಮೊದಲೇ ಬರದಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ವಿಮೆ ಕಂಪನಿಗಳು ನಷ್ಟ ಪರಿಹಾರ ನೀಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

2015-16ನೇ ಕೃಷಿ ಗಣತಿ ಪ್ರಕಾರ ಜಿಲ್ಲೆಯಲ್ಲಿ 232623 ರೈತರಿದ್ದು ಇವರಲ್ಲಿ 2018-19ನೇ ಸಾಲಿನಲ್ಲಿ 27551ರೈತರು ವಿವಿಧ ಬೆಳೆಯ ವಿಮೆ ವಂತಿಕೆ ಪಾವತಿಸಿದ್ದಾರೆ. ಆದರೆ ಮಳೆ ಆಗದೇ ಇರುವುದರಿಂದ ಬೆಳೆ ನಷ್ಟವಾಗಿದ್ದರೂ ಸತತ ಬರದಿಂದ ಕಂಗಾಲಾಗಿರುವ ರೈತರಿಗೆ ಸಮರ್ಪಕ ವಿಮೆ ಪಾತಿಯಾಗಿಲ್ಲ. ಕೇವಲ 12527 ರೈತರಿಗೆ 14,42,65,589 ರೂಪಾಯಿ ರೈತರ ಖಾತೆಗೆ ಜಮಾಗೊಂಡಿದೆ ಎಂದು ದಾಖಲೆಗಳು ಹೇಳುತ್ತಿವೆ.

27 ಸಾವಿರಕ್ಕೂ ಹೆಚ್ಚು ರೈತರು ವಿಮಾ ಕಂಪನಿಗೆ ವಂತಿಗೆ ಪಾವತಿಸಿದ್ದಾರೆ. ಇವರ ಜಮೀನಿನಲ್ಲಿ ಬೆಳೆ ನಷ್ಟವಾಗಿದೆ ಪರಿಹಾರ ಮಾತ್ರ ಸಿಕ್ಕಿಲ್ಲ. ಹಾಗಾಗಿ ಬೆಳೆ ವಿಮೆ ವಿಷಯವಾಗಿ ಜಿಲ್ಲೆಯ ರೈತರು ತೀವ್ರ ಗೊಂದಲಕ್ಕೆ ಸಿಲುಕಿದ್ದಾರೆ.

ಈ ಮಧ್ಯೆ ಕೆಂಭಾವಿ ವ್ಯಾಪ್ತಿಯ ರೈತ ತಿರುಪತಿ ಎಂಬುವರು ತನ್ನ 9 ಎಕರೆ ಜಮೀನಿನಲ್ಲಿ ತೊಗರಿ ಬಿತ್ತನೆ ಮಾಡಿ ವಿಮೆ ಕಂಪನಿಗೆ 3059 ರೂ. ವಂತಿಗೆ ಪಾವತಿಸಿದ್ದರು. ಕಂಪನಿಯ ಷರತ್ತಿನ ಪ್ರಕಾರ ಅವರ 9 ಎಕರೆಯಲ್ಲಿನ ಬೆಳೆಗೆ 152976 ಪರಿಹಾರ ನೀಡಬೇಕಿತ್ತು. ಆದರೆ ವಿಮಾ ಕಂಪನಿ ಕೇವಲ 13 ಸಾವಿರ ರೂ.ಗಳನ್ನು ಖಾತೆಗೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ರೈತರು ಬೆಳೆವಿಮೆ ಪಾವತಿಸಿದ್ದರೂ ಅವರಿಗೆ ಬೆಳೆ ವಿಮೆ ಸಿಗದಿರಲು ಹಲವು ತಾಂತ್ರಿಕ ಕಾರಣಗಳು ಕಂಡು ಬಂದಿವೆ. ಪ್ರಮುಖವಾಗಿ ಬೆಳೆಯ ವಿಮಾ ಪರಿಹಾರ ವಿತರಣೆ ವೇಳೆ ಕಳೆದ 5 ವರ್ಷಗಳ ಇಳುವರಿ ಗಮನಿಸಿ ಬೆಳೆ ವಿಮೆ ಕಟ್ಟಿದ ವರ್ಷ ಆ ಭಾಗದ ಗ್ರಾಪಂ, ಹೋಬಳಿ, ತಾಲೂಕಿನಲ್ಲಿ ಪ್ರಸಕ್ತ ವರ್ಷ ಇಳುವರಿ ಆಧಾರವಾಗಿಟ್ಟುಕೊಂಡು ವಿಮೆ ಪರಿಹಾರ ನೀಡಲಾಗುತ್ತಿದೆ ಎನ್ನುವ ಅಂಶ ತಿಳಿದು ಬಂದಿದೆ. ರೈತರ ಪಹಣಿಯಲ್ಲಿ ನೋಂದಾಯಿಸಿರುವ ಬೆಳೆ, ಸಾಲದ ವೇಳೆ ನೋಂದಾಯಿಸಿರುವುದು ಒಂದೇ ಆಗಿರಬೇಕು. ಉದಾ: ತೊಗರಿ ಬೆಳೆಗೆಂದು ಸಾಲ ಪಡೆದು ಹೊಲದಲ್ಲಿ ಹತ್ತಿ ಬೆಳೆದರೆ ಪರಿಹಾರದಿಂದ ವಂಚಿತವಾಗಬಹುದು ಎನ್ನಲಾಗಿದೆ.

ಪ್ರಮುಖವಾಗಿ ಬೆಳೆ ವಿಮೆಯ ವಂತಿಕೆ ಕಟ್ಟುವ ಸಮಯದಲ್ಲಿ ಯಾವ ಬೆಳೆಯನ್ನು ನಮೂದಿಸಲಾಗಿದೆಯೋ ಅದೇ ಬೆಳೆ ಬಿತ್ತಿರಬೇಕು. ಬೇರೆ ಬೀಜ ಬಿತ್ತಿದರೆ ಸಮಸ್ಯೆಯಾಗುತ್ತದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಿಂದ ತಿಳಿದು ಬಂದಿದೆ.

ಹಾಗಾಗಿ ಬೆಳೆ ವಿಮೆ ಮಾಡಿಸುವ ಸಂದರ್ಭದಲ್ಲಿ ರೈತರು ವಿಮೆ ಮಾಡಿಸುವ ವೇಳೆ ಎಲ್ಲವನ್ನೂ ಸರಿಯಾಗಿ ಅರಿಯುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next