ಯಾದಗಿರಿ: ತಾಲೂಕಿನ ಮುದ್ನಾಳ ಗ್ರಾಮದ 249/1 ಸರ್ವೇ ನಂಬರ್‌ನಲ್ಲಿ ಒಂದೇ ಜಾಗದಲ್ಲಿ ಸುಮಾರು 9 ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಆರೋಪಿಸಿದ್ದಾರೆ.
ಒಂದೇ ಜಾಗದಲ್ಲಿ ರಂಗ ಮಂದಿರ, ಶೌಚಾಲಯ, ನೀರಿನ ಮೇಲ್ತೊಟ್ಟಿ, ತೆರೆದ ಬಾವಿ, ಕೊಳವೆ ಬಾವಿ, ರಾಶಿಕಣ, ದನಕರುಗಳ ಕುಡಿವ ನೀರಿನ ತೊಟ್ಟಿ, ಸಿ.ಸಿ.ರಸ್ತೆ ಮತ್ತು ಚರಂಡಿ, ರಸ್ತೆ ಡಾಂಬರೀಕರಣ ಕಾಮಗಾರಿಗಳನ್ನು ಮಾಡಲಾಗಿದೆ.
ಗ್ರಾಮ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳಿಂದ ಕಾನೂನು ಬಾಹಿರವಾಗಿ ಕೆಲಸ ನಿರ್ವಹಿಸಿದ್ದು, ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಒಂದೇ ಕಡೆ 9 ಕಾಮಗಾರಿ ನಿರ್ವಹಣೆಯಾಗಿರುವುದು ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇವರ ಅಳಿಯ ಕಂಪ್ಯೂಟರ್ ಆಪರೇಟರ್ ಸೇರಿಕೊಂಡು ಅಕ್ರಮ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇಷ್ಟೆಲ್ಲಾ ಅವ್ಯವಹಾರ ನಡೆದಿದ್ದನ್ನು ಗಮನಕ್ಕೆ ತಂದರೂ ಸಹ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಶಿಕ್ಷೆ ವಿಧಿಸಬೇಕು. ಕಾಮಗಾರಿ ಹೆಸರಿನಲ್ಲಿ ಎತ್ತಿಹಾಕಿದ ಹಣವನ್ನು ಅವರಿಂದ ಸರ್ಕಾರದ ಬೊಕ್ಕಸಕ್ಕೆ ತುಂಬಿಸಿಕೊಳ್ಳಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಮುದ್ನಾಳ ಗ್ರಾಮದ ಅವ್ಯವಹಾರದ ದೂರು ನೀಡಿ ಎರಡು ತಿಂಗಳು ಗತಿಸಿದರೂ ಕ್ರಮ ಕೈಗೊಳ್ಳದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವ್ಯವಹಾರ ಬಗ್ಗೆ ದೂರು ನೀಡಿದರೂ ಏಕೆ ಪರಿಶೀಲನೆಗೆ ಮುಂದಾಗುತ್ತಿಲ್ಲ. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.
•
ಉಮೇಶ ಕೆ. ಮುದ್ನಾಳ,
ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ