ಯಾದಗಿರಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿ 20 ಆಂಗ್ಲ ಮಾಧ್ಯಮ ಶಾಲೆಗಳನ್ನು ಸರ್ಕಾರ ಆರಂಭಿಸುತ್ತಿರುವುದು ಬಹುತೇಕ ನಗರದ ಪ್ರದೇಶಗಳನ್ನು ಹೊರತು ಪಡಿಸಿ ಗ್ರಾಮೀಣ ಭಾಗಕ್ಕೆ ಆದ್ಯತೆ ನೀಡಲಾಗಿದೆ.
ಸಾಕಷ್ಟು ನಗರ ಪ್ರದೇಶದಲ್ಲಿ ಹತ್ತು ಹಲವು ಖಾಸಗಿ ಸಂಸ್ಥೆಗಳು ತಲೆ ಎತ್ತಿ ಶಿಕ್ಷಣವನ್ನು ವ್ಯಾಪಾರವನ್ನಾಗಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಸರ್ಕಾರವೇ ಸರ್ಕಾರಿ ಶಾಲೆಗಳಲ್ಲಿ ಬಡ ವರ್ಗದ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಒದಗಿಸುವ ಗುರಿಯಿದೆ.
ಪ್ರಸ್ತುತ ಜಿಲ್ಲೆಯ 20 ಸರ್ಕಾರಿ ಶಾಲೆಗಳ ಪಟ್ಟಿ ಬಿಡುಗಡೆಯಾಗಿದ್ದು, ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ 5, ಶಹಾಪುರ 5, ಸುರಪುರ 6 ಹಾಗೂ ಯಾದಗಿರಿ 4 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಗರಿಷ್ಟ 30 ಮಕ್ಕಳ ದಾಖಲಿಸಿಕೊಂಡು ಮಕ್ಕಳಿಗೆ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲಾಗುತ್ತದೆ. ಈ ಶಾಲೆಗಳಲ್ಲೂ ಎಲ್ಲಾ ಸರ್ಕಾರಿ ಶಾಲೆಗಳಂತೆ ಉಚಿತ ಸಮವಸ್ತ್ರ, ಬಿಸಿಯೂಟ, ಪಠ್ಯಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಎಲ್ಲೆಲ್ಲಿದೆ ಆಂಗ್ಲ ಶಾಲೆ: ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಂದಕೂರ ಜಿಎಂಪಿಎಸ್, ಚಂಡರಕಿ ಜಿಎಂಪಿಎಸ್, ಯರಗೋಳ ಹೆಚ್ಪಿಎಸ್, ಗಾಜರಕೋಟ ಜಿಎಂಪಿಎಸ್, ಕೊಂಕಲ್ ಜಿಎಂಪಿಎಸ್ ಆಯ್ಕೆಯಾಗಿದೆ. ಶಹಾಪುರ ವಿಧಾನಸಭಾ ಕ್ಷೇತ್ರದ ಶಿರವಾಳ ಜಿಎಂಪಿಎಸ್, ಹತ್ತಿಗೂಡೂರ ಹೆಚ್ಪಿಎಸ್, ಸಗರ ಎಂಪಿಎಸ್ ಬಾಲಕರ, ನಗನೂರ ಎಂಪಿಎಸ್, ಕೆಂಭಾವಿ ಎಂಪಿಎಸ್. ಸುರಪುರ ವಿಧಾನಸಭಾ ಕ್ಷೇತ್ರದ ಬಾಲಕಿಯರ ಎಂಪಿಎಸ್ ಸುರಪುರ, ಆಳ್ದಾಳ, ಹೇಮನೂರ ಹಾಗೂ ಕನ್ನಳ್ಳಿ (ಆರ್‌ಎಂಎಸ್‌ಎ), ಹುಣಸಗಿ ಕ್ಯಾಂಪ್ ಎಂಪಿಎಸ್ ಹಾಗೂ ರಂಗಂಪೇಟ್ ಜಿಹೆಚ್ಎಸ್ ಶಾಲೆಗಳು ಆಯ್ಕೆಯಾಗಿದ್ದರೆ, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ದೋರನಹಳ್ಳಿ ಹೆಚ್ಪಿಎಸ್, ವಡಗೇರಾ ಎಂಪಿಎಸ್, ಹಯ್ನಾಳ ಎಂಪಿಎಸ್ ಹಾಗೂ ರಾಮಸಮುದ್ರ ಹೆಚ್ಪಿಎಸ್ ಆಯ್ಕೆಯಾಗಿದೆ.
ನಗರ ಪ್ರದೇಶಕ್ಕಿಲ್ಲ ಆಂಗ್ಲ ಶಾಲೆ
ಆಯ್ಕೆಯಾದ 20 ಶಾಲೆಗಳು ಆಯಾ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಆರಂಭಿಸಲಾಗುತ್ತಿದ್ದು, ವಿಧಾನಸಭೆ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಒಂದನ್ನು ಆರಂಭಿಸಬೇಕಿತ್ತು ಎನ್ನುವುದು ಪಾಲಕರ ಮಾತು. ನಗರದ ಪ್ರದೇಶಗಳಲ್ಲಿಯೂ ಬಡ ವರ್ಗದ ಮಕ್ಕಳು ಇರುತ್ತಾರೆ. ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಿ ಮಕ್ಕಳನ್ನು ಓದಿಸುವುದು ಕಷ್ಟವಾಗುತ್ತದೆ. ಹಾಗಾಗಿ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯನ್ನು ನಗರ ಪ್ರದೇಶದಲ್ಲಿಯೂ ಆರಂಭಿಸಬೇಕು ಎನ್ನುವ ಮಾತು ಪಾಲಕರಿಂದ ಕೇಳಿ ಬರುತ್ತಿದೆ.
ಪ್ರಸಕ್ತ ವರ್ಷದಿಂದ ಸರ್ಕಾರ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸುತ್ತಿದ್ದು, ಜಿಲ್ಲೆಯಲ್ಲಿ 20 ಶಾಲೆ ಆಯ್ಕೆಯಾಗಿದೆ. ಬಡ ಮಕ್ಕಳಿಗೂ ಇಂಗ್ಲಿಷ್ ಕಲಿಯುವ ಆಶಯ ಇದರಿಂದ ಈಡೇರಲಿದ್ದು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯ ಹೊಂದಿದೆ.
•
ಶ್ರೀಶೈಲ ಬಿರಾದಾರ,
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು