Advertisement

ತಹಶೀಲ್ದಾರ್‌ ಸೂಚನೆ ಕಡ್ಡಾಯ ಪಾಲಿಸಿ

11:28 AM Aug 07, 2019 | Team Udayavani |

ಯಾದಗಿರಿ: ನೆರೆ ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಾಗಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ ಪ್ರಸ್ತುತ ಒಳಹರಿವು 3.30 ಲಕ್ಷ ಕ್ಯೂಸೆಕ್‌ ಇದೆ. ಇದು 4.5 ಲಕ್ಷ ಕ್ಯೂಸೆಕ್‌ಗೆ ಹೆಚ್ಚುವ ಸಾಧ್ಯತೆ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಕೃಷ್ಣಾ ನದಿಗೆ ಹರಿಬಿಡಲಾಗುತ್ತದೆ. ಕಾರಣ ವಡಗೇರಾ ತಾಲೂಕಿನ ಚೆನ್ನೂರು ಮತ್ತು ಗೊಂದೆನೂರ ಹಳ್ಳಿಗಳ ಜನರನ್ನು ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.

ಚೆನ್ನೂರು ಮತ್ತು ಗೊಂದೆನೂರ ಗ್ರಾಮಗಳು ಸೇರಿದಂತೆ ಪ್ರವಾಹ ಎದುರಿಸುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕುರಿತು ಡಂಗೂರ ಸಾರಬೇಕು. ಈ ಎರಡೂ ಗ್ರಾಮಗಳ ಜನರನ್ನು ವಾಹನಗಳಲ್ಲಿ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವ ಜನರ ಹೆಸರು ಮತ್ತು ಅವರ ಸಂಪೂರ್ಣ ವಿವರವನ್ನು ಪಡೆಯಬೇಕು. ಒಂದು ವೇಳೆ ಅವರು ಬೇರೆ ಊರುಗಳ ತಮ್ಮ ಸಂಬಂಧಿಕರ ಮನೆಗೆ ತೆರಳಿದರೂ ಮಾಹಿತಿ ಪಡೆಯಬೇಕು. ಅದೇ ರೀತಿಯಾಗಿ ಜಾನುವಾರುಗಳನ್ನು ಕೂಡ ಸ್ಥಳಾಂತರಿಸಬೇಕು. ಜನರನ್ನು ಬೋಟ್‌ಗಳ ಮೂಲಕ ಸ್ಥಳಾಂತರಿಸುವ ಪರಿಸ್ಥಿತಿ ಯಾವ ಹಳ್ಳಿಗಳಲ್ಲೂ ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು. ನಾರಾಯಣಪುರ ಜಲಾಶಯದಿಂದ 5 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಿದರೆ ಸುರಪುರ ತಾಲೂಕಿನ ಶೆಳ್ಳಗಿ, ದೇವಾಪುರ, ನೀಲಕಂಠರಾಯನಗಡ್ಡಿ ಗ್ರಾಮಗಳಿಗೆ ತೊಂದರೆಯಾಗಬಹುದು. ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಸಿದ್ಧತೆಯಲ್ಲಿರಬೇಕು. ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಹಣಕಾಸಿನ ಕೊರತೆ ಇಲ್ಲ. ಇನ್ನು ಪ್ರವಾಹಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖಾವಾರು ತಮ್ಮ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಅಲ್ಲದೇ, ಮಾರ್ಗದರ್ಶನ ನೀಡಬೇಕು. ತಹಶೀಲ್ದಾರರು ತಾಲೂಕು ಮಟ್ಟದಲ್ಲಿ ಸಿಂಗಲ್ ಕಮಾಂಡೋ ಇದ್ದಂತೆ. ಹಾಗಾಗಿ, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಹಶೀಲ್ದಾರ್‌ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ನಿರ್ದೇಶಿಸಿದರು.

ಪ್ರವಾಹ ನಿರ್ವಹಣಾ ತಂಡ ಭೇಟಿ: ಯಾದಗಿರಿ ಜಿಲ್ಲೆಗೆ ಪ್ರವಾಹ ನಿರ್ವಹಣಾ 60 ಜನರ ತಂಡ ಬರಲಿದೆ. ವಡಗೇರಾ ಮತ್ತು ತಿಂಥಣಿಯಲ್ಲಿ ಅಗ್ನಿ ಶಾಮಕ ವಾಹನಗಳನ್ನು ನಿಲ್ಲಿಸಲಾಗಿದೆ. ವಡಗೇರಾದಲ್ಲಿ ಚಾಲಕ ಸಹಿತ 1 ಓಬಿಎಮ್‌ ಬೋಟ್, ತಿಂಥಣಿ ದೇವಸ್ಥಾನದ ಹತ್ತಿರ ಚಾಲಕ ಸಹಿತ 1 ಫೈಬರ್‌ ಹಾಗೂ 1 ಓಬಿಎಮ್‌ ಬೋಟ್‌ಗಳು ಕಾರ್ಯ ಸ್ಥಿತಿಯಲ್ಲಿವೆ ಎಂದರು.

ಶೆಳ್ಳಗಿ, ನೀಲಕಂಠರಾಯನ ಗಡ್ಡಿ, ಕೊಳ್ಳೂರು (ಎಂ) ಸೇರಿದಂತೆ ಕೃಷ್ಣಾ ನೀರಿನಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿದೆ. ಆದರೆ, ರೈತರು ಕಂಬಗಳಿಗೆ ವಿದ್ಯುತ್‌ ವೈರ್‌ಗಳಿಗೆ ಕೊಂಡಿ ಹಾಕಿ ವಿದ್ಯುತ್‌ ಪಡೆಯುತ್ತಿದ್ದಾರೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಡಿ. ರಾಘವೇಂದ್ರ ಅವರು ಸಭೆಯ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿಗಳು ಮಾತನಾಡಿ, ಪ್ರವಾಹ ನಿರ್ವಹಣಾ ಕ್ರಮವಾಗಿ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ವಿದ್ಯುತ್‌ ವೈರ್‌ಗಳಿಗೆ ಕೊಂಡಿ ಹಾಕಿದರೆ ಅವಘಡ ಸಂಭವವಿರುತ್ತದೆ. ಕಾರಣ, ನದಿ ಪಾತ್ರದ ಸಾರ್ವಜನಿಕರು ಹಾಗೂ ರೈತರು ಸಹಕರಿಸಬೇಕು. ಅದೇ ರೀತಿ ಕಷ್ಣಾ ನದಿ ಪಾತ್ರದಲ್ಲಿರುವ ಜನರು ನದಿ ಹತ್ತಿರ ಹೋಗುವುದು, ನದಿಗೆ ಇಳಿಯುವುದು ಮತ್ತು ಜಾನುವಾರುಗಳನ್ನು ನದಿಗೆ ಬಿಡಬಾರದು ಎಂದು ಕೋರಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಲ್ಲಾ ಪಂಚಾಯಿತಿ ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ಕೇಂದ್ರದ ಅಧಿಕಾರಿ ಸಿದ್ಧಾರೆಡ್ಡಿ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next