Advertisement

ಉದ್ಘಾಟನೆಗೆ ಸಿದ್ಧ ವಾದ ಸುಸಜ್ಜಿತ ಜಿಲ್ಲಾಸ್ಪತ್ರೆ

12:20 PM Dec 14, 2019 | Naveen |

ಅನೀಲ ಬಸೂದೆ
ಯಾದಗಿರಿ:
ಸುಮಾರು ನಾಲ್ಕು ವರ್ಷಗಳ ಹಿಂದೆ ಆರಂಭವಾಗಿದ್ದ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ದಿನಾಂಕ ನಿಗದಿಯಾವುದೊಂದೇ ಬಾಕಿ ಉಳಿದಿದೆ. ಯಾದಗಿರಿ ಜಿಲ್ಲಾಕೇಂದ್ರವಾದರೂ ತಾಲೂಕು ಆಸ್ಪತ್ರೆ ಸೌಲಭ್ಯಗಳಿವೆ. ಇಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ರಾಯಚೂರು, ಕಲಬುರ್ಗಿಗೆ ರೋಗಿಗಳನ್ನು ಕಳುಹಿಸಲಾಗುತ್ತದೆ ಎಂದು ಕೊರಗುತ್ತಿದ್ದ ಜಿಲ್ಲೆಯ ಜನರು ಈಗ ಚಿಕಿತ್ಸೆ ಪಡೆಯುವ ದಿನಗಳು ಹತ್ತಿರದಲ್ಲಿವೆ. 300 ಹಾಸಿಗೆ ಸೌಲಭ್ಯದ ಜಿಲ್ಲಾಸ್ಪತ್ರೆ ಕಟ್ಟಡ ಪೂರ್ಣಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರದ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಆರಂಭಕ್ಕೆ ಮಂಜೂರಾತಿ ನೀಡಿದ್ದು, ಬಡಜನರು ಆರೋಗ್ಯ ಸೇವೆ ಪಡೆಯಲು ಸಹಕಾರಯಾಗಲಿದೆ.

Advertisement

ಪ್ರಸ್ತುತ ಜಿಲ್ಲಾ ಕೇಂದ್ರದಿಂದ ವಸತಿ ಪ್ರದೇಶದಿಂದ ಸುಮಾರು 3 ಕಿಮೀ ದೂರದಲ್ಲಿ ಭವ್ಯ ಸುಸಜ್ಜಿತ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಅಂದಾಜು 52 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿ ಸೇವೆಗೆ ಸಿದ್ಧವಾಗಿದೆ.

ನೆಲ ಮಹಡಿ ಸೇರಿ ನಾಲ್ಕು ಅಂತಸ್ತಿ ಕಟ್ಟಡ ನಿರ್ಮಾಣವಾಗಿದೆ. ಹೊರಾಂಗಣದಲ್ಲಿ ಕಣ್ಣಿಗೆ ಮುದ ನೀಡುವ ಹಚ್ಚ ಹಸಿರಿನಿಂದ ಕೂಡಿದ ಹುಲ್ಲಿನ ಹಾಸಿಗೆ ಹಾಕಲಾಗಿದೆ. ಗಿಡಗಳನ್ನು ನೆಟ್ಟು ಪರಿಸರ ಕಾಪಾಡಲು ಕ್ರಮವಹಿಸಲಾಗಿದೆ. ಒಂದು ಕಡೆ ತುರ್ತು ಚಿಕಿತ್ಸಾ ವಿಭಾಗ, ಒಂದು ಬಾರಿಗೆ 20 ಜನರು ತೆರಳುವ ಸಾಮರ್ಥ್ಯದ ನಾಲ್ಕು ಲಿಫ್ಟ್‌ ಗಳನ್ನು ನಿರ್ಮಿಸಲಾಗಿದ್ದು, ರ್‍ಯಾಂಪ್‌ ವ್ಯವಸ್ಥೆಯೂ ಇದೆ. ಆಡಳಿತ ವರ್ಗದ ಪ್ರತ್ಯೇಕ ಬ್ಲಾಕ್‌ ಹೊಂದಿದ್ದು, ಶವಾಗಾರ, ಶಸ್ತ್ರ ಚಿಕಿತ್ಸಾ ವಿಭಾಗ ಸೇರಿದಂತೆ ಆಸ್ಪತ್ರೆ
ವೈದ್ಯರಿಗಾಗಿ 8 ವಸತಿ ಗೃಹ, 12 ಶುಶೂಷ್ರಕಿಯರು ಹಾಗೂ 8 ಡಿ ದರ್ಜೆ ನೌಕರರ ವಸತಿ ಗೃಹಗಳನ್ನು ಆಸ್ಪತ್ರೆ ಆವರಣದಲ್ಲಿಯೇ ನಿರ್ಮಿಸಲಾಗಿದೆ.

ಈಗಿರುವ ಹಳೆ ಆಸ್ಪತ್ರೆಯಲ್ಲಿ 19 ವೈದ್ಯರು, 22
ಶುಶೂಷ್ರಕಿಯರು ಹಾಗೂ 50 ಡಿ ದರ್ಜೆ ನೌಕರರು ಸೇರಿ ಒಟ್ಟು 90 ಜನ ಸಿಬ್ಬಂದಿಗಳಿದ್ದು, ಜಿಲ್ಲಾಸ್ಪತ್ರೆ ಉದ್ಘಾಟನೆ ಬಳಿಕ 43 ವೈದ್ಯರು,  ಶೂಷ್ರಕಿಯರು ಹಾಗೂ ಡಿ ದರ್ಜೆ ನೌಕರರು ಸೇರಿ 240 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇಲಾಖೆ ಮೂಲಗಳ ಪ್ರಕಾರ ಸದ್ಯ ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಮೆಡಿಕಲ್‌ ಕಾಲೇಜು ನಿರ್ಮಾಣವಾಗಲಿದ್ದು, ಅದಕ್ಕೆ 325 ಕೋಟಿ ರೂ. ಮಂಜೂರಾತಿ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡಲಿವೆ. ಹಣ ಬಿಡುಗಡೆಯಾದರೆ ಕಾಮಗಾರಿ ನಿರ್ಮಾಣ ಕಾರ್ಯವೂ ಆರಂಭವಾಗಲಿದೆ ಎನ್ನಲಾಗಿದೆ.

Advertisement

ನಿಗದಿಯಾಗದ ಮುಹೂರ್ತ
ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಶೇ.99ರಷ್ಟು ಮುಕ್ತಾಯವಾಗಿದ್ದು, ಇನ್ನೇನಿದ್ದರೂ ಉದ್ಘಾಟನೆಗೆ ದಿನಾಂಕ ನಿಗದಿಯಾಗಬೇಕಿದೆ. ಆರೋಗ್ಯ ಇಲಾಖೆ ಮೂಲಕಗಳ ಪ್ರಕಾರ ಉದ್ಘಾಟನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಬಹುತೇಕ 2020ರ ಜನವರಿಯಲ್ಲಿ ಉದ್ಘಾಟನೆಯಾಗಬಹುದು ಎನ್ನಲಾಗಿದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರ ಶೀಘ್ರವೇ ಉದ್ಘಾಟನೆ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕಿದೆ.

ಮೆಡಿಕಲ್‌ ಕಾಲೇಜು ಮಂಜೂರು
ಕೇಂದ್ರ ಸರ್ಕಾರ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಿರುವ ಕುರಿತು ಕೇಂದ್ರದ ಆರೋಗ್ಯ ಖಾತೆ ಸಚಿವ ಡಾ| ಹರ್ಷವರ್ಧನ ಅವರು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಪತ್ರ ಬರೆದಿದ್ದಾರೆ. ನಿಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಾದಗಿರಿ ಜಿಲ್ಲಾಸ್ಪತ್ರೆಯನ್ನು ಮೆಡಿಕಲ್‌ ಕಾಲೇಜು ಆಗಿ ಮೇಲ್ದರ್ಜೆಗೇರಿಸಲಾಗಿದೆ.ಆ ಭಾಗದ ಜನರ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next