ಅನೀಲ ಬಸೂದೆ
ಯಾದಗಿರಿ: ಜಿಲ್ಲೆಯಲ್ಲಿ ಐದು ಕಡೆಗಳಲ್ಲಿ ಭಾರತೀಯ ಹತ್ತಿ ನಿಗಮ ಮತ್ತು ಮಿಲ್‌ಗಳೊಂದಿಗೆ ಒಪ್ಪಂದ ಮಾಡಿ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಆರಂಭಿಸಲು ನಿರ್ಧರಿಸಿ, ಶಹಾಪುರದಲ್ಲಿ ಖರೀದಿ ಆರಂಭಗೊಂಡು ಎರಡು ತಿಂಗಳು ಕಳೆಯುತ್ತಿದ್ದರೂ ಇನ್ನು ಯಾದಗಿರಿಯಲ್ಲಿ ಖರೀದಿಯೇ ಆರಂಭವಾಗಿಲ್ಲ. ಹಾಗಾಗಿ ತಾಲೂಕಿನ ರೈತರ ಸಂಪೂರ್ಣ ಹತ್ತಿ ದಲ್ಲಾಳಿಗಳ ಪಾಲಾಗುವಂತಾಗಿದೆ.
ಹತ್ತಿ ನಿಗಮದ ಅಧಿಕಾರಿಗಳು ಮಿಲ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ವಿಳಂಬ ಮಾಡಿದ್ದರಿಂದ ಹಿಂದಿನಿಂದಲೂ ತಾವು ಖರೀದಿಸುತ್ತಿದ್ದ ಹತ್ತಿ ಸಂಗ್ರಹಕ್ಕೆ ಜಾಗದ ಕೊರತೆ ಎದುರಾಗಿದ್ದರಿಂದ ಹತ್ತಿ ನಿಮಗದ ಅಧಿಕಾರಿಗಳಿಗೆ ಸ್ಥಳಾವಕಾಶವಿಲ್ಲ ಎನ್ನುವ ನೆಪ ಹೇಳಿ ಜಾರಿಕೊಂಡಿವೆ ಎನ್ನಲಾಗಿದೆ.
ಕಳೆದೆರಡು ತಿಂಗಳಿನಿಂದಲೂ ರೈತರು ಹತ್ತಿ ಮಾರಾಟ ಮಾಡುತ್ತಿದ್ದು, ಶಹಾಪುರದಲ್ಲಿ ಖರೀದಿಗೆ 3 ಕೇಂದ್ರ ನಿಗದಿ ಮಾಡಲಾಗಿದೆ. ಯಾದಗಿರಿಯಲ್ಲಿ ಖರೀದಿ ಕೇಂದ್ರ ಆರಂಭವಾಗದಿರುವ ಹಿನ್ನೆಲೆ ಹೆಸರು ನೋಂದಾಯಿಸಿದ್ದ ಸುಮಾರು 37 ರೈತರ ಹತ್ತಿ ಬೆಳೆಯನ್ನು ಅಧಿಕಾರಿಗಳು ಶಹಾಪುರದಲ್ಲಿ ಮಾರಾಟ ಮಾಡುವ ಅನುಕೂಲ ಕಲ್ಪಿಸಿದ್ದರಿಂದ ಇಲ್ಲಿನ ರೈತರು ಆ ಕೇಂದ್ರಗಳಲ್ಲಿ ಮಾರಾಟ ಮಾಡಿದ್ದಾರೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
ಗುಣಮಟ್ಟದ ಆಧಾರದಲ್ಲಿ ಕ್ವಿಂಟಲ್ ಗೆ 5,250ರಿಂದ 5,550 ರೂ. ದರ ನಿಗದಿ ಮಾಡಲಾಗಿದ್ದು, ಜಿಲ್ಲೆಯ ಶಹಾಪುರ, ಯಾದಗಿರಿ, ಗುರುಮಠಕಲ್ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಹತ್ತಿ ಬೆಳೆದಿದ್ದು, ಈಗ ಹತ್ತಿ ಕಟಾವಿಗೆ ಬಂದು ರೈತರು ಕಟಾವು ಮಾಡಿದ ಹತ್ತಿಯಲ್ಲಿ ಅನಿವಾರ್ಯವಾಗಿ ರಸ್ತೆ ಬದಿಯ ಅನಧಿಕೃತ ತಲೆಎತ್ತಿದ ಕೇಂದ್ರಗಳಲ್ಲಿಯೇ ಮಾರಾಟ ಮಾಡುವಂತಾಗಿದೆ.
ಹತ್ತಿ ಖರೀದಿಗೆ ತಾತ್ಕಾಲಿಕ ವ್ಯಾಪಾರ: ಬಹುತೇಕ ಕಡೆ ರಸ್ತೆಯುದ್ದಕ್ಕೂ ದಲ್ಲಾಳಿಗಳು ರೈತರಿಂದ ಹತ್ತಿ ಖರೀದಿಸಲು ತಾತ್ಕಾಲಿಕ ವ್ಯಾಪಾರ ಆರಂಭಿಸಿದ್ದು, ಇದರಿಂದ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೇ ರೈತರಿಂದ ಖರೀದಿಸುತ್ತಿರುವುದು ಅಮಾಯಕ ರೈತರು ಬೆಳೆಗೆ ನಗದು ತಕ್ಷಣ ದೊರೆಯುವ ಕಾರಣಕ್ಕೆ ಕಡಿಮೆಯಾದರೂ ಸರಿ ಎಂದು ಮಾರಾಟದಲ್ಲಿ ತೊಡಗಿದ್ದಾರೆ. ಮುಂದುವರಿದ ದಂಡ ವಸೂಲಿ: ರಸ್ತೆ ಬದಿಯಲ್ಲಿ ಅನಧಿಕೃತವಾಗಿ ರೈತರಿಂದ ಹತ್ತಿ ಖರೀದಿಸುವ ದಲ್ಲಾಳಿಗಳ ಮೇಲೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಭೀಮರಾಯ ಎಂ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಮಂಗಳವಾರವೂ ಹಲವೆಡೆ ದಾಳಿ ನಡೆಸಿ ಅಂದಾಜು 2.50 ಲಕ್ಷ ರೂ. ದಂಡ ವಿ ಧಿಸಿದ್ದಾರೆ. ಒಟ್ಟು 16 ಸ್ಥಳಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಈ ವರೆಗೆ 11 ಲಕ್ಷಕ್ಕೂ ಅಧಿಕ ದಂಡ ವಿಧಿಸಿ ಅನಧಿಕೃತ ಕೇಂದ್ರಗಳನ್ನು ತೆರವುಗೊಳಿಸಿದ್ದಾರೆ.
ಹತ್ತಿಗೆ ಸೂಕ್ತ ಬೆಲೆ ದೊರೆಯಲು ಸಿಸಿಐನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಸರ್ಕಾರ ನಿಗದಿಪಡಿಸಿದ ಬೆಲೆ ದೊರೆಯಲಿದೆ. ಜಿಲ್ಲೆಯ ಶಹಾಪುರ ವ್ಯಾಪ್ತಿಯಲ್ಲಿ ಹತ್ತಿ ಖರೀದಿ ನಡೆಯುತ್ತಿದೆ. ಯಾದಗಿರಿಯಲ್ಲಿ ಮಿಲ್‌ನವರು ಸ್ಥಳಾವಕಾಶ ನೀಡದಿರುವುದರಿಂದ ಖರೀದಿ ಕೇಂದ್ರ ಆರಂಭಿಸಲು ಸಾಧ್ಯವಾಗಿಲ್ಲ. ರಸ್ತೆ ಬದಿಯಲ್ಲಿ ರೈತರಿಂದ ಹತ್ತಿಯನ್ನು ಅನಧಿಕೃತ ಖರೀದಿಸುತ್ತಿರುವವರ ಮೇಲೆ ದಾಳಿ ಮುಂದುವರಿದಿದ್ದು ದಂಡ ವಿಧಿ ಸಲಾಗುತ್ತಿದೆ.
ಭೀಮರಾಯ, ಸಹಾಯಕ ನಿರ್ದೇಶಕರು,
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ