ಯಾದಗಿರಿ: ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಟಿ ಬಸ್ ನಿಲ್ದಾಣ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಕಾಮಗಾರಿ ಕಳೆದ ಎರಡು ವರ್ಷದಿಂದ ಆಮೆಗತಿಯಲ್ಲಿ ಸಾಗಿರುವುದರಿಂದ ಸಮಸ್ಯೆಯಾಗಿದ್ದು, ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೊಸ ಬಸ್ ನಿಲ್ದಾಣ ಉದ್ಘಾಟನೆಯಾದ ನಂತರ ಹಳೆ ಬಸ್ ನಿಲ್ದಾಣ ಸ್ಥಳದಲ್ಲಿ ಸಿಟಿ ಬಸ್ ನಿಲ್ದಾಣ ಹಾಗೂ ಬೇರೆಡೆ ತೆರಳುವ ಗ್ರಾಮೀಣ ಬಸ್‌ಗಳು ಒಳಗಡೆ ಬಂದು ಹೋಗುವಂತೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಅಂದಾಜು 5 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಆದರೆ ಕಾಮಗಾರಿ ಆಮೆಗತಿಯಲ್ಲಿ ನಡೆದಿರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಗ್ರಾಮೀಣ ಪ್ರದೇಶಕ್ಕೆ ತೆರಳುವ ಪ್ರಯಾಣಿಕರು ಇದೇ ಹಳೆ ಬಸ್ ನಿಲ್ದಾಣವನ್ನೇ ಅವಲಂಬಿಸಿರುವುದರಿಂದ ಜನತೆಗೆ ತೀವ್ರ ತೊಂದರೆಯಾಗುತ್ತಿದ್ದು, ಈಗಾಗಲೇ ಬಸ್‌ಗಳು ನಿಲ್ದಾಣದ ಒಳಗೆ ಬಂದು ಹೋಗುತ್ತಿರುವುದರಿಂದ ಜನರು ನಿಲ್ದಾಣದ ಒಳಗೆ ಮತ್ತು ಹೊರಗಡೆ ರಸ್ತೆಯ ಮೇಲೆ ನಿಲ್ಲುವಂತಾಗಿದೆ. ನಿಲ್ದಾಣದ ಒಳಗಡೆ ಯಾವುದೇ ಸೌಕರ್ಯ ಇಲ್ಲದೇ ಇರುವುದರಿಂದ ಜನರು ನಿಂತುಕೊಂಡೆ ಬಸ್‌ಗೆ ಕಾಯಬೇಕಾಗಿದೆ.
ಹೆದ್ದಾರಿ ಆಗಿರುವುದರಿಂದ ವಾಹನಗಳ ಸಂಚಾರ ದಟ್ಟಣೆಯು ಸಹ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಈಗಾಗಲೇ ಹಲವು ಅವಘಡಗಳು ಸಂಭವಿಸಿವೆ. ಇದಲ್ಲದೇ ಕಾಮಗಾರಿ ನಡೆಯುತ್ತಿರುವುದರಿಂದ ರಾತ್ರಿ ವೇಳೆ ಕತ್ತಲು ತುಂಬಿಕೊಳ್ಳುತ್ತಿದ್ದು, ಅನೈತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಆಡಳಿತ ಎಚ್ಚೆತ್ತುಕೊಂಡು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ತ್ವರಿಗ ಕಾಮಗಾರಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.