Advertisement

ಡಿಸಿಸಿ ಬ್ಯಾಂಕ್‌ ಅವ್ಯವಹಾರಕ್ಕೆ ಮುಲಾಜಿಲ್ಲದೇ ಕ್ರಮ: ಸಿಎಂ

09:51 AM Jun 22, 2019 | Naveen |

ಚಂಡರಕಿ (ಯಾದಗಿರಿ): ನದಿ ಮೂಲಗಳಿಂದ ಯಾದಗಿರಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಜಲಧಾರೆ ಯೋಜನೆ ಅಡಿ ಸಮಗ್ರ ನೀರು ಪೂರೈಸಲು ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಂಡ್ರಕಿಯಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯು ನೀರಿನ ಮೂಲಗಳಿದ್ದರೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗುವುದು ಎಂದರು.

ಯಾದಗಿರಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ: 100 ಹಾಸಿಗೆಯುಳ್ಳ ಯಾದಗಿರಿ ಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಗೆ ಹೆಚ್ಚಿಸುವುದರ ಜತೆಗೆ ಇತರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಯಾದಗಿರಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವೈದ್ಯಕೀಯ ಕಾಲೇಜಿನಿಂದ ಹಿಂದೆ ಸರಿಯಲಾಗಿದೆ ಎಂದು ಪ್ರಕಟಿಸಿದರು.

ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ ಈ ಭಾಗದ ವಿದ್ಯಾರ್ಥಿಗಳ್ಯಾರು ಓದುವುದಿಲ್ಲ. ಹೀಗಾಗಿ ಆಸ್ಪತ್ರೆ ಮೇಲ್ದರ್ಜೆಗೇರಿಸಿದರೆ ಉತ್ತಮ ಆರೋಗ್ಯ ಸೇವೆ ಸಿಗಲು ಕಾರಣವಾಗುತ್ತದೆ ಎಂದು ವಿವರಣೆ ನೀಡಿದರು.

ಈ ಹಿಂದೆ 2006ರಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು ಫಲಪ್ರದವಾಗಿದೆ. ಈ ಬಾರಿ ಪ್ರತಿ ತಿಂಗಳು ಒಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಚಂಡರಕಿ ಗ್ರಾಮದಿಂದ ಈ ಕಾರ್ಯಕ್ರಮ ಆರಂಭವಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಮಂಜೂರು ಮಾಡಲಾಗಿದೆ. ಪಶು ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಮೂಲಕ ಸಾರ್ವಜನಿಕರ ಅರ್ಜಿಗಳನ್ನು ಸಮಾಧಾನಕರವಾಗಿ ಪರಿಶೀಲಿಸಲಾಗುವುದು. ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸಾಧ್ಯವಿರುವ ಕಾರ್ಯಗಳಿಗೆ ಇಲ್ಲಿಯೇ ಆದೇಶ ನೀಡಲಾಗುವುದು. ಶಾಸಕ ಶರಣಬಸಪ್ಪ ದರ್ಶನಾಪುರ ಕೋರಿಕೆಯಂತೆ ಶಹಾಪುರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಶಹಾಪುರಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆ ಯೋಜನೆಗೂ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

Advertisement

ಗಣಿ, ಭೂವಿಜ್ಞಾನ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಶೇಖರ ಬಿ.ಪಾಟೀಲ ಮಾತನಾಡಿ, ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ 2006ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಹಲವು ಗ್ರಾಮಗಳ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಈಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜ್ಯದ ಗ್ರಾಮೀಣ ಜನರ ಕಷ್ಟಗಳನ್ನು ನೇರವಾಗಿ ಅರಿಯಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಚಂಡ್ರಕಿ ಗ್ರಾಮದಿಂದ ಆರಂಭಿಸುತ್ತಿರುವುದು ಹೆಮ್ಮೆ ವಿಷಯವಾಗಿದೆ ಎಂದರು.

ಮುಖ್ಯಮಂತ್ರಿಗಳ ಕಾರ್ಯದ ಮಾದರಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರುಪ್ರತಿ ತಿಂಗಳು ಗ್ರಾಮ ವಾಸ್ತವ್ಯ ಆರಂಭಿಸಲಿದ್ದೇವೆ ಎಂಬುದಾಗಿ ಸಚಿವ ರಾಜಶೇಖರ ಪಾಟೀಲ ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಗುರುಮಠಕಲ್ ಶಾಸಕರಾದ ನಾಗನಗೌಡ ಕಂದಕೂರ ಮಾತನಾಡಿ, ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.

ಇದೇ ವೇಳೆ ಚಂಡರಕಿ ಗ್ರಾಮದ ಹಲವಾರು ರೈತರಿಗೆ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರಗಳ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ಪ್ರೋತ್ಸಾಹಿಸಲಾಯಿತು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಎಂ. ಖರ್ಗೆ, ಪಶುಸಂಗೋಪನೆ ಸಚಿವರಾದ ವೆಂಕಟರಾವ್‌ ನಾಡಗೌಡ, ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ, ಶಾಸಕ ಶರಣಬಸಪ್ಪ ದರ್ಶನಾಪುರ, ಜಿ.ಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್. ಭೋಜೇಗೌಡ, ತಿಪ್ಪಣ್ಣಪ್ಪ ಕಮಕನೂರ, ಶರಣಪ್ಪ ಮಟ್ಟೂರ, ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌. ಎಚ್. ಕೋನರಡ್ಡಿ, ಜಿ.ಪಂ. ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಅಪರ ಕಾರ್ಯದರ್ಶಿ ಬಿ.ಎನ್‌. ಕೃಷ್ಣಯ್ಯ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅಶ್ವಿ‌ನ ಜಿ.ಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನವಣೆ, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ (ಜನತಾ ದರ್ಶನ) ಶ್ರೀನಿವಾಸ ಎಂ., ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ ಮತ್ತಿತರರು ಇದ್ದರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸ್ವಾಗತಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ ವಂದಿಸಿದರು.

ಬ್ಯಾಗ್‌ ವಿತರಣೆ: ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಹರ್ಷಗೊಂಡಿರುವ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಹಣ ವ್ಯಯ ಮಾಡುವ ಬದಲು, ಆ ಹಣದಲ್ಲಿ ಚಂಡರಕಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲು ಮುಂದಾದರು. ಅಲ್ಲದೇ ಮುಖ್ಯಮಂತ್ರಿಗಳ ಮುಖಾಂತರ ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ವಿತರಿಸಿದ್ದು ಮಾದರಿಯೆನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next