ಯಾದಗಿರಿ: ನೂತನ ಜಿಲ್ಲಾ ಕೇಂದ್ರವಾಗಿ ದಶಕ ಕಳೆಯುತ್ತಿದ್ದರೂ ಇನ್ನೂ ಅಧಿಕಾರಿ ಸ್ಥಾನಗಳು ಪ್ರಭಾರಿಗಳಿಂದಲೇ ರಾರಾಜಿಸುತ್ತಿವೆ. ಅದರಲ್ಲಿ ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಮರ್ಪಕ ಅರ್ಹ ಅಧಿಕಾರಿಗಳು ಇಲ್ಲದಿರುವುದು ವಿಪರ್ಯಾಸ ಸಂಗತಿಯಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಯಾದಗಿರಿ, ಗುರುಮಠಕಲ್, ಸುರಪುರ ಹಾಗೂ ಶಹಾಪುರದಲ್ಲಿ 4 ಶಿಶು ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಮಂಜೂರಾಗಿದ್ದು, ನೂತನ ತಾಲೂಕು ಕೇಂದ್ರಗಳಾದ ವಡಗೇರಾ ಹಾಗೂ ಹುಣಸಗಿಗೆ ಇನ್ನು ಹುದ್ದೆಯೇ ಮಂಜೂರಾಗಿಲ್ಲ.
ಪ್ರಸ್ತುತ ಯಾದಗಿರಿಗೆ ಒಬ್ಬರೇ ಶಿಶು ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಹರಿದ್ದು, ಉಳಿದಂತೆ ಗುರುಮಠಕಲ್ನಲ್ಲಿ ಮೇಲ್ವಿಚಾರಕಿಗೆ ಪ್ರಭಾರವನ್ನು ವಹಿಸಲಾಗಿದೆ. ಇನ್ನು ಸುರಪುರ ಹಾಗೂ ಶಹಾಪುರದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾದಗಿರಿ ಜಿಲ್ಲೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ಒಂದಾಗಿದ್ದು, ಸರ್ಕಾರ ಆರೋಗ್ಯ, ಶಿಶುಗಳ ಪೌಷ್ಟಿಕತೆ, ಕೃಷಿ ಹೀಗೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಆದರೇ ಜಿಲ್ಲೆಯ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಬೇಕಿರುವ ಅಧಿಕಾರಿಗಳೇ ಇಲ್ಲದಂತಾಗಿದೆ.
ಜಿಲ್ಲೆ ಅಭಿವೃದ್ಧಿಯತ್ತ ಸಾಗಲು ಅರ್ಹ ಅಧಿಕಾರಿಗಳು ಕಡ್ಡಾಯವಾಗಿಬೇಕು, ಅಂತಹದರಲ್ಲಿ ಪ್ರಮುಖ ಇಲಾಖೆಯಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಮರ್ಪಕ ಅಧಿಕಾರಿಗಳಿಲ್ಲದಿರುವುದು ಜಿಲ್ಲೆಯಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲು ಹೇಗೆ ಸಾಧ್ಯ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಶೀಘ್ರವೇ ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲು ಮುಂದಾಗಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಜಿಲ್ಲೆಯಲ್ಲಿ ಪ್ರಮುಖವಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಬೇಕು. ಕೆಲವು ಕಡೆ ಮೇಲ್ವಿಚಾರಕರು ಅಧಿಕಾರ ವಹಿಸಿಕೊಂಡಿದ್ದು ಒಬ್ಬರೇ ಅಂಗನವಾಡಿ ಕೇಂದ್ರಗಳ ನಿರ್ವಹಣೆ ಕುರಿತು ಗಮನಿಸುವುದು ಹಾಗೂ ಕಚೇರಿ ಕೆಲಸವನ್ನು ಮಾಡುವುದು ತೊಂದರೆಯಾಗುತ್ತದೆ.
•
ಉಮೇಶ ಕೆ. ಮುದ್ನಾಳ
ಸಾಮಾಜಿಕ ಕಾರ್ಯಕರ್ತ
ಜಿಲ್ಲೆಯಲ್ಲಿ 4 ಶಿಶು ಅಭಿವೃದ್ಧಿ ಅಧಿಕಾರಿಗಳುಬೇಕು, 3 ಕಡೆ ಪ್ರಭಾರಿ ಅಧಿಕಾರಿಗಳಿದ್ದಾರೆ. ಈಗಾಗಲೇ ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿಕೊಂಡಿದ್ದು, ತರಬೇತಿಯಲ್ಲಿದ್ದಾರೆ. ಇನ್ನು ಒಂದು ತಿಂಗಳಲ್ಲಿ ಜಿಲ್ಲೆಗೆ ಶಿಶು ಅಭಿವೃದ್ಧಿ ಅಧಿಕಾರಿಗಳು ಬರಬಹುದು.
•
ಪ್ರಭಾಕರ, ಉಪನಿರ್ದೇಶಕ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ