ಯಾದಗಿರಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪ್ರವಾಹದಿಂದ ಸಹಸ್ರಾರು ಜನರು ಸಂಕಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸೆ. 13ರಂದು ಬೆಳಗ್ಗೆ 11:00 ಗಂಟೆಗೆ ಜಿಲ್ಲಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಯಂತ್ಯುತ್ಸವ ಅಂಗವಾಗಿ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಅಂದು ಬೆಳಗ್ಗೆ 11:00 ಗಂಟೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಅದರಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿಯೂ ಸಹ ಶ್ರದ್ಧಾ, ಭಕ್ತಿಯೊಂದಿಗೆ ಜಯಂತಿಯನ್ನು ಸರಳವಾಗಿ ಆಚರಿಸಬೇಕು. ತಾಲೂಕು ಮಟ್ಟದಲ್ಲಿ ಕೂಡ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಪ್ರವಾಹ ಸಂತ್ರಸ್ತರಿಗೆ ಜಯಂತಿ ಹಣ: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 29ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಈಡಿಗ ಸಮಾಜದ ಮುಖಂಡರು ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವ ಇಚ್ಛೆ ವ್ಯಕ್ತಪಡಿಸಿ ಜಯಂತಿ ಆಚರಣೆಗೆ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡುವ ಹಣವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಲು ನಿರ್ಣಯಿಸಿದ್ದಾರೆ. ಅದರಂತೆ ಯಾದಗಿರಿ ಜಿಲ್ಲೆಯ ಜಯಂತಿ ಆಚರಣೆ ಅನುದಾನ ಸಹ ನೀಡಲು ಜಿಲ್ಲಾ ಈಡಿಗ ಸಮಾಜದವರು ಸಹಮತ ವ್ಯಕ್ತಪಡಿಸಿದರು.
ಡಿವೈಎಸ್‌ಪಿ ಯು. ಶರಣಪ್ಪ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ವಿಕ್ರಂಸಿಂಗ್, ಸಮಾಜದ ಮುಖಂಡ ರಾಜಶೇಖರಗೌಡ ವಡಗೇರಾ, ಮಹಿಂದ್ರ ಅನಪುರ, ರವೀಂದ್ರ ಮುಂಡರಗಿ, ಮಲ್ಲಿಕಾರ್ಜುನ ಕಲಾಲ್, ದಂಡಯ್ಯ ಬಳಿಚಕ್ರ, ಶಿವಯ್ಯ ಬಳಿಚಕ್ರ ಸಭೆಯಲ್ಲಿ ಇದ್ದರು.