ಯಾದಗಿರಿ: ದೇಶದಲ್ಲಿ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಜಾತಿ, ಹಣ ಆಧಾರದಲ್ಲಿ ಚುನಾವಣೆ ನಡೆಸುತ್ತಿವೆ. ಆದರೇ, ಬಿಜೆಪಿ ಯಾವತ್ತು ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರನ್ನು ಆಧಾರವಾಗಿಟ್ಟುಕೊಂಡು ಚುನಾವಣೆ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಎನ್. ರವಿಕುಮಾರ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿ ಸದಸ್ವತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಡಿದ ಅವರು, ಕಾಂಗ್ರೆಸ್ ಘಟಬಂಧನ ಸರ್ಕಾರ ಇನ್ನೇನು ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದರು, ದೇಶದ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿ ಬೂತ್ ಮಟ್ಟದಲ್ಲಿ ಸಂಘಟನೆ ಹೊಂದಿದೆ. ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಟ ಶೇ. 20 ಸದಸ್ಯತ್ವ ಗುರಿ ಹಮ್ಮಿಕೊಳ್ಳಲಾಗಿದೆ. ಮೋದಿ ಸರ್ಕಾರ ಜಾತಿ ಆಧಾರದಲ್ಲಿ ಯೋಜನೆಗಳನ್ನು ನೀಡಿಲ್ಲ. ಇಂದು ಎಲ್ಲಾ ಜಾತಿ ಜನರಿಗೆ ಯೋಜನೆಗಳ ಲಾಭ ತಲುಪಿದೆ. ಹಾಗಾಗಿ ಸದಸ್ಯತ್ವ ಪಡೆಯಲು ಜನ ಹಿಂದೆ ಮುಂದೆ ನೋಡಲ್ಲ ಎಂದರು.
ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಕಳೆದ ಬಾರಿ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿ 2.30 ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗಿದೆ. ಈ ಬಾರಿಯೂ ಪ್ರಮುಖ ಕಾರ್ಯಕರ್ತರು ದುಪ್ಪಟ್ಟು ಗುರಿ ಸಾಧಿಸುವ ಕಾರ್ಯ ಮಾಡಬೇಕು ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ಮಾತನಾಡಿ, ಸಂಘಟನೆಗೆ ಪ್ರಾತಿನಿಧ್ಯ ಕೊಡುವ ಪಕ್ಷ ಬಿಜೆಪಿ, ದೇಶದಲ್ಲಿ ಗೆದ್ದು ಕೆಲ ತಿಂಗಳಲ್ಲಿ ಮತ್ತೆ ಅಭಿಯಾನ ಆರಂಭಿಸಿದೆ ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆರಿಸಿ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಾ| ಎ.ಬಿ. ಮಾಲಕರೆಡ್ಡಿ, ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಜಿಲ್ಲಾ ಸದಸ್ಯತ್ವ ಅಭಿಯಾನದ ಸಂಚಾಲಕ ಶರಣಗೌಡ ಬಾಡಿಯಾಳ, ದೇವೇಂದ್ರನಾಥ ನಾದ, ಖಂಡಪ್ಪ ದಾಸನ, ದೇವರಾಜ ನಾಯಕ್, ವೆಂಕಟರಡ್ಡಿ ಅಬ್ಬೆತುಮಕೂರು ಸೇರಿದಂತೆ ಪ್ರಮುಖ ಕಾರ್ಯಕರ್ತರು ಇದ್ದರು.