Advertisement

ಗುರಿ ಸಾಧನೆಯಲ್ಲಿ ಭಗೀರಥ ಪ್ರಯತ್ನ ಆದರ್ಶ

02:43 PM May 12, 2019 | Naveen |

ಯಾದಗಿರಿ: ಭಗೀರಥ ಮಹರ್ಷಿಗಳು ತಮ್ಮ ಕಠೊರ ತಪಸ್ಸಿನ ಮೂಲಕ ಬ್ರಹ್ಮದೇವ ಹಾಗೂ ಪರಮಾತ್ಮನನ್ನು ಮೆಚ್ಚಿಸಿ ಗಂಗಾಮಾತೆಯನ್ನು ಧರೆಗೆ ಕರೆತಂದರು. ಅವರಂತೆಯೇ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ ಹೇಳಿದರು.

Advertisement

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ಶ್ರೀ ಭಗೀರಥ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದ್ದರಿಂದ ನಮ್ಮ ನಿತ್ಯ ಜೀವನದಲ್ಲಿ ಮೊದಲು ಪ್ರಯತ್ನ ಪಡಬೇಕು. ನಂತರ ಯಶಸ್ಸು ತಾನಾಗಿಯೇ ಒಲಿದುಬರುತ್ತದೆ. ಪ್ರಸ್ತುತ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಇದೆ. ಶಿಕ್ಷಣ ಇಲ್ಲದ ಕುಟುಂಬ ಅಂಧಕಾರದಲ್ಲಿರುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಬಹುದು ಎಂದು ಸಲಹೆ ನೀಡಿದರು.

ಸರ್ಕಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ರಾಘವೇಂದ್ರ ಬಂಡಿಮನಿ ಉಪನ್ಯಾಸ ನೀಡಿ, ದಿಲೀಪ್‌ ಮಹಾರಾಜನ ಪುತ್ರನಾದ ಭಗೀರಥ ಮಹರ್ಷಿಗಳು ತನ್ನ 60 ಜನ ತಾತಂದಿರ ಮೋಕ್ಷಕ್ಕಾಗಿ ಪಂಚಾಗ್ನಿ ತಪಸ್ಸು ಮಾಡಿ ಬ್ರಹ್ಮದೇವನನ್ನು ಒಲಿಸಿಕೊಳ್ಳುತ್ತಾರೆ. ನಂತರ ಬ್ರಹ್ಮದೇವನ ಸಲಹೆಯಂತೆ ಮತ್ತೆ ಕಠೊರ ತಪಸ್ಸನ್ನು ಆಚರಿಸುವ ಮೂಲಕ ಪರಶಿವನನ್ನು ಮೆಚ್ಚಿಸಿ ಗಂಗಾಮಾತೆಯನ್ನು ಧರೆಗೆ ಕರೆತರುತ್ತಾರೆ. ಹೀಗಾಗಿ, ಯಾವುದೇ ಕೆಲಸ ಮಾಡುವಾಗ ಅಥವಾ ಮಾಡಿದಾಗ ಭಗೀರಥನಂತೆ ಪಯತ್ನ ಮಾಡು, ನೀನು ಮಾಡಿದ್ದು ಭಗೀರಥ ಪ್ರಯತ್ನ ಎಂಬುದಾಗಿ ಹಿರಿಯರು ಪ್ರೋತ್ಸಾಹಿಸುತ್ತಾರೆ. ಭಗೀರಥ ಮಹರ್ಷಿಗಳ ಕುಲವಂಶಸ್ಥರನ್ನು ಕರ್ನಾಟಕದಲ್ಲಿ ಉಪ್ಪಾರ, ಉತ್ತರ ಭಾರತದಲ್ಲಿ ಲೋನಾರ, ಆಂಧ್ರಪ್ರದೇಶದಲ್ಲಿ ಸಗರ, ಸಾಗರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ ಎಂದು ಹೇಳಿದರು.

ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ದೇವಿದಾಸ ಪಾಟೀಲ, ಮಹರ್ಷಿ ಶ್ರೀ ಭಗೀರಥ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ, ಸಮಾಜದ ಮುಖಂಡರಾದ ಸುಭಾಶ್ಚಂದ್ರ ಕೋಟಗೇರಿ, ಜಿಲ್ಲಾ ನೌಕರರ ಸಂಘದ ವಿಶ್ವನಾಥ ಗುಡೂರು, ಡಿ.ಎಂ.ವೆಂಕಟೇಶ, ಶರಣಪ್ಪ ದಳಪತಿ, ವಕೀಲರಾದ ದೇವಿಂದ್ರಪ್ಪ ಎಚ್. ಯರಗೋಳ, ಗಣಪತಿ ಪೂಜಾರಿ, ರಾಮಣ್ಣ ಬಳಿಚಕ್ರ ಕೋಟಗೇರಿ, ಶ್ರೀಶೈಲ ಕೋಟಗೇರಿ ಸೇರಿದಂತೆ ಸಮಾಜದ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

ಲಿಂಗೇರಿ ಸ್ಟೇಷನ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ಕಲಾವಿದ ವಿಥೇಶ್‌ಕುಮಾರ ನಾಡಗೀತೆ ಹಾಡಿದರು. ಶ್ರೀನಿವಾಸ ಸಣ್ಣಸಂಬರ ತಬಲಾ ಸಾಥ್‌ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರುಪ್ರಸಾದ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next