ಅನೀಲ ಬಸೂದೆ
ಯಾದಗಿರಿ: ಕಳೆದೆರಡು ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಸುರಿದ ಮಹಾಮಳೆಯಿಂದ ಬಸವಸಾಗರ ಜಲಾಶಯದಿಂದ ನದಿ ಪಾತ್ರಕ್ಕೆ ನೀರು ಹರಿಬಿಟ್ಟಿದ್ದರಿಂದ ಜಿಲ್ಲೆಯ ನದಿ ತೀರದ ಗ್ರಾಮಗಳ ಮನೆಗಳಿಗೆ ಮತ್ತು ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿ ಜನರನ್ನು ಕಂಗಾಲಾಗಿಸಿತ್ತು.
ಜಿಲ್ಲೆಯಲ್ಲಿ ಪ್ರವಾಹದಿಂದ 190 ಕೋಟಿ ರೂ. ಹಾನಿಯಾಗಿರುವ ಕುರಿತು ಅಂದಾಜಿಸಲಾಗಿದ್ದು, ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಒಟ್ಟು 28 ಕೋಟಿ ಹಾನಿಯಾಗಿರುವ ಕುರಿತು ವರದಿಯಿದೆ. ಪ್ರವಾಹದಿಂದ ಆಗಿರುವ ಅಂದಾಜು ಹಾನಿಗೂ ಎನ್‌ಡಿಆರ್‌ಎಫ್ ಹಾನಿಯ ವರದಿಗೂ ವ್ಯತ್ಯಾಸ ಇದ್ದು, ಸರ್ಕಾರ ನೈಜ ಸ್ಥಿತಿ ಅವಲೋಕಿಸಿ ಸೂಕ್ತ ಪರಿಹಾರ ನೀಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ಈವರೆಗೆ ಮನೆಗೆ ನೀರು ನುಗ್ಗಿರುವ ಮತ್ತು ಮನೆಗೆ ಅಲ್ಪ ಹಾನಿಯಾಗಿರುವ ಜನರನ್ನು ಗುರುತಿಸಿ ಜಿಲ್ಲಾಡಳಿತ ಪರಿಹಾರ ನೀಡುವ ಕಾರ್ಯ ಮಾಡಿದ್ದು, ಆದರೇ, ಪ್ರವಾಹದ ನೀರು ಸೃಷ್ಟಿಸಿದ ಅವಾಂತರದಿಂದ 10,153 ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ತೊಗರಿ, ಹತ್ತಿ, ಭತ್ತದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಂದಾಯ, ಕೃಷಿ ಇಲಾಖೆಯಿಂದ ಜಂಟಿ ಸರ್ವೇ ನಡೆಸಲಾಗಿದೆ.
ಈವರೆಗೆ ಬೆಳೆ ಕಳೆದುಕೊಂಡ ರೈತರಿಗೆ ನಯಾ ಪೈಸೆಯೂ ಪರಿಹಾರವನ್ನು ಸರ್ಕಾರ ವಿತರಿಸದಿರುವುದು ರೈತಾಪಿ ವರ್ಗದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ 442 ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿರುವ ಸಾಮಗ್ರಿ ಕಳೆದುಕೊಂಡಿದ್ದರು. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಜಿಲ್ಲೆಯ 7 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಗಳಿಗೆ ಸೇರಿದ್ದರು.
ಸುಮಾರು 100ರಷ್ಟು ಮನೆಗಳಿಗೆ ಅಲ್ಪಸ್ವಲ್ವ ಹಾನಿಯಾಗಿದ್ದರಿಂದ ಒಟ್ಟು 69.20 ಲಕ್ಷ ರೂ.ಪಾಯಿಗಳ ಪರಿಹಾರವನ್ನು ಜಿಲ್ಲಾಡಳಿತ ವಿತರಿಸಿದೆ. ಪ್ರವಾಹದ ಪರಿಣಾಮ ಹತ್ತಿಗೂಡೂರ ಸಮೀಪದ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಿ ಅಲ್ಲಿನ ರಸ್ತೆಯೇ ರಭಸಕ್ಕೆ ಕೊಚ್ಚಿ ಹೋಗಿತ್ತು. ಶಹಾಪುರ ತಾಲೂಕಿನ ಮರಕಲ್, ಕೊಳ್ಳೂರು, ಡೊಣ್ಣೂರು, ಯಕ್ಷಿಂತಿ, ಗೌಡೂರು ಹಾಗೂ ಚನ್ನೂರು ಗ್ರಾಮದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿ ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ತೆಗ್ಗು ದಿನ್ನಿಯಾಗಿ ಜಮೀನು ಗುರುತಿಸಿದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ. ಅಲ್ಲದೇ ಸುರಪುರ ತಾಲೂಕಿನಲ್ಲಿ ಅಪಾರ ಪ್ರಮಾಣ ಹಾನಿಯಾಗಿದ್ದು, ಜನರು ನಿರಾಶ್ರಿತರಾಗಿದ್ದರು, ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ತಿಂಥಿಣಿ ಮತ್ತು ದೇವಾಪುರ ಗ್ರಾಮಗಳ ಜನರು ಸಾಕಷ್ಟು ಪರದಾಡುವಂತಾಗಿತ್ತು.